ಬೆಂಗಳೂರು, ಏ.25: ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ನಂತರ ಬೇಸಿಗೆ ಬಿರುಬಿಸಿಲಿಗಿಂತ ಮಿಗಿಲಾಗಿ ಪ್ರಚಾರದ ಅಬ್ಬರ, ರಾಜಕೀಯ ಪಕ್ಷಗಳ ನಾಯಕರ ಮಾತಿನ ಮೇಲಾಟಗಳಿಗೆ ಭೂಮಿಕೆಯಾಗಿದ್ದ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಂಪೂರ್ಣ ಸಜ್ಜುಗೊಳಿಸಲಾಗಿದೆ.
ಬೆಂಗಳೂರು, ಮೈಸೂರು, ಮಂಗಳೂರು ಸೇರಿ 14: ಕ್ಷೇತ್ರಗಳಲ್ಲಿ ಆಯ್ಕೆ ಬಯಸಿ ಕಾಂಗ್ರೆಸ್ ನ 14, ಬಿಜೆಪಿಯ 13 ಮತ್ತು ಜೆಡಿಎಸ್ ನ 3 ಸೇರಿದಂತೆ ಒಟ್ಟು 247 ಮಂದಿ ಅಭ್ಯರ್ಥಿಗಳ ಹಣೆ ಬರಹವನ್ನು 2,88,19,342 ಮತದಾರರು ಬರೆಯಲಿದ್ದಾರೆ.
ಇದಕ್ಕಾಗಿ 30,602: ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸೇರಿದಂತೆ ಲೋಕಸಭಾ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ.ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ1.40 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ.ಇದರ ಜೊತೆಗೆ 5,000 ಮಂದಿ ಸೂಕ್ಷ್ಮ ವೀಕ್ಷಕರು, 50 ಸಾವಿರ ಪೊಲೀಸ್ ಸಿಬ್ಬಂದಿ ಮತ್ತು65 ಅರಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಮತದಾನ ಮಾಡಲು ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ ಹಾಗೂ ವೋಟರ್ ಸ್ಲಿಪ್ ಅನ್ನು ತೋರಿಸಿ ಮತ ಚಲಾಯಿಸಬಹುದು. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಪರ್ಯಾಯವಾಗಿ ಭಾವಚಿತ್ರವುಳ್ಳ ಇತರೆ ಅಧಿಕೃತ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ.
ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್, ಪೋಸ್ಟ್ ಆಫೀಸ್ ಪಾಸ್ ಬುಕ್, ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್, ಪಿಂಚಣಿಯ ದಾಖಲೆ, ಕೇಂದ್ರ, ರಾಜ್ಯ ಸರ್ಕಾರಗಳು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿರುವ ಗುರುತಿನ ಚೀಟಿ, ಎಂಪಿ, ಎಂಎಲ್‍ಎ, ಎಂಎನ್‍ಸಿಗಳಿಗೆ ನೀಡಿರುವ ಗುರುತಿನ ಚೀಟಿಗಳು, ಭಾರತ ಸರ್ಕಾರ ನೀಡಿರುವ ವಿಶಿಷ್ಟ ಅಂಗವೈಕಲ್ಯ ಕಾರ್ಡ್ ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ, ಹಿರಿಯ ನಾಯಕರಾದ ಗೋವಿಂದ್ ಕಾರಜೋಳ, ಡಿ.ಕೆ.ಸುರೇಶ್, ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವರು ಕಣದಲ್ಲಿದ್ದಾರೆ.
ಬುಧವಾರ ಈ ಎಲ್ಲಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು ಎಲ್ಲ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸದ್ದು ಗದ್ದಲವಿಲ್ಲದೆ ಮತಗಟ್ಟೆಗೆ ತೆರಳುವ ಮತದಾರರನ್ನು ನಾನಾ ರೀತಿ ‘ಓಲೈಸುವ’ ಒಳತಂತ್ರ ನಡೆಸಿದರು.
ಕಳೆದ ತಿಂಗಳು ಚುನಾವಣಾ ಅಧಿಸೂಚನೆ ಹೊರಗಿದ್ದ ನಂತರ ಹಳೇ ಮೈಸೂರು ಪ್ರಾಂತ್ಯದ ವ್ಯಾಪ್ತಿ ಒಳಗೊಂಡ ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರದ ಅಬ್ಬರ ಮೇರೆ ಮೀರಿತ್ತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಮೈತ್ರಿಕೂಟದ ಅಭ್ಯರ್ಥಿಗಳ ಪರ ರ್ಕ್ಯಾಲಿ, ರೋಡ್ ಶೋ ನಡೆಸಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಕ್ಷೇತ್ರಗಳೂ ಮೊದಲ ಹಂತದ ವ್ಯಾಪ್ತಿಯಲ್ಲಿರುವ ಕಾರಣ ಇಬ್ಬರೂ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸ್ವತಃ ಮಂಡ್ಯದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು ಚುನಾವಣೆಯ ಕಾವನ್ನು ಇನ್ನಷ್ಟು ಹೆಚ್ಚಿಸಿತ್ತು. ಬಹಿರಂಗ ಪ್ರಚಾರದ ಕೊನೆಯ ದಿನವೂ ಕುಮಾರಸ್ವಾಮಿ ಮಂಡ್ಯದಲ್ಲಿ ರೋಡ್ ಶೋ ನಡೆಸಿ, ಬಿರುಸಿನ ಪ್ರಚಾರ ನಡೆಸಿದರು.
ಈ ಇಳಿವಯಸ್ಸಿನಲ್ಲೂ ಪುತ್ರನ ಜತೆಗೆ ಇತರೆ ಕ್ಷೇತ್ರಗಳಲ್ಲೂ ಚುರುಕಿನ ಚುನಾವಣಾ ಪ್ರಚಾರ ಕೈಗೊಂಡ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದ್ದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೈತ್ರಿಕೂಟದ ಅಭ್ಯರ್ಥಿಗಳ ಪರ, ಜೆಡಿಎಸ್ ನಾಯಕರ ಜತೆಗೆ ಅನೇಕ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡರು.
ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಅವರು ಹಾಸನ, ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಠಿಕಾಣಿ ಹೂಡಿದ್ದಾರೆ.
ಕೊನೆಯ ದಿನ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹುಬ್ಬಳ್ಳಿಗೆ ತೆರಳಿ, ಮತದಾನದ ದಿನ ಸ್ವಕ್ಷೇತ್ರ ಮೈಸೂರಿಗೆ ಮರಳಿದರು.. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಗುರುವಾರ ಬೆಂಗಳೂರಿನಲ್ಲಿರುವರು.
ಗ್ರಾಮಾಂತರದಲ್ಲಿ ತೀವ್ರ ನಿಗಾ:
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತೀವ್ರ ನಿಗಾ ವಹಿಸಿದ್ದು, ಎಲ್ಲ 2,829 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಮಾಡಲಾಗುತ್ತಿದೆ .
ಭದ್ರತೆಗಾಗಿ ಅರೆ ಸೇನಾಪಡೆಗಳ ಏಳು ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲೂ ಎಲ್ಲ 2,202 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು ಎಂದರು.
ಮತಗಟ್ಟೆಯಲ್ಲಿನ ಪ್ರತಿ ಸೆಕೆಂಡ್ ಅವಧಿಯ ಬೆಳವಣಿಗೆಯು ವೆಬ್ ಕಾಸ್ಟಿಂಗ್‌ನಲ್ಲಿ ಲಭ್ಯವಾಗಲಿದೆ.

