ಬೆಂಗಳೂರು, ಸೆ.11 – ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಿ ಇಲ್ಲವೇ ರಸ್ತೆ ತೆರಿಗೆ ರದ್ದು ಮಾಡಬೇಕು,ರ‍್ಯಾಪಿಡೊ ಬೈಕ್ ಟ್ಯಾಕ್ಸಿ ನಿಷೇಧಿಸಿ,ಖಾಸಗಿ ವಾಹನ ಚಾಲಕರಿಗೆ ಮಾಸಿಕ 10 ಸಾವಿರ ಸಹಾಯಧನ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಇಂದು ನಗರದಲ್ಲಿ ನಡೆಸುತ್ತಿರುವ ಬೆಂಗಳೂರು ಬಂದ್ (Bengaluru Bandh) ಬಹುತೇಕ ಯಶಸ್ವಿಯಾಯಿತು.
ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸುಮಾರು 4 ಲಕ್ಷ ಆಟೋ, 2 ಲಕ್ಷ ಟ್ಯಾಕ್ಸಿ, 30 ಸಾವಿರ ಗೂಡ್ಸ್ ವಾಹನಗಳು, 8 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 90 ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೊರೇಟ್ ಕಂಪನಿ ಬಸ್‌ಗಳು ಸಂಚಾರ ನಿಲ್ಲಿಸಿರುವುದರಿಂದ ನಗರದಲ್ಲಿ ಸಂಚರಿಸುವ ದೂರ ದೂರಗಳಿಗೆ ಹೋಗುವ ಪ್ರಯಾಣಿಕರು ಪರದಾಡುವಂತಾಯಿತು.
ಓಲಾ, ಉಬರ್ ಆಟೋ ಟ್ಯಾಕ್ಸಿ ಸಹ ಬಂದ್ ಆಗಿದ್ದವು ಕಾರ್ಪೊರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್‍ಗಳು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರಿಂದ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳ ಹಾಜರಾತಿ ಕಡಿಮೆಯಾಗಿತ್ತು.
ಖಾಸಗಿ ವಾಹನಗಳ ಮೂಲಕ ಕಚೇರಿಗಳು,ಐಟಿಬಿಟಿ ಕಂಪನಿಗಳು ಅದಕ್ಕೆ ಪೂರಕವಾದ ಕಂಪನಿಗಳ ಕಚೇರಿಗಳು ಕಾರ್ಖಾನೆಗಳು,ಗಾರ್ಮೆಂಟ್ಸ್ ನೌಕರರು,ಕಾರ್ಮಿಕರು ಮುಷ್ಕರದಿಂದಾಗಿ ಮನೆಯಲ್ಲಿ ಉಳಿದ ಪರಿಣಾಮ ಈ ಸಂಸ್ಥೆಗಳಲ್ಲಿ ಹಾಜರಾತಿ ತೀರಾ ಕಡಿಮೆಯಿತ್ತು ಬಂದ್ ವೇಳೆ ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ಅನುಕೂಲಕ್ಕಾಗಿ 500 ಕ್ಕೂ ಬಿಎಂಟಿಸಿ ಬಸ್‌ಗಳು ಹೆಚ್ಚುವರಿಯಾಗಿ 4,000 ಟ್ರಿಪ್ ಸಂಚರಿಸಿದರೂ ಪ್ರಯಾಣಿಕರ ಒತ್ತಡವನ್ನು ನಿಭಾಯಿಸುವುದು ಸಾಧ್ಯವಾಗಲಿಲ್ಲ 40ಕ್ಕೂ ಹೆಚ್ಚು ಖಾಸಗಿ ಸಾರಿಗೆ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ಕೊಟ್ಟಿದ್ದು ನಗರದಲ್ಲಿ ಆಟೋ, ಕ್ಯಾಬ್, ವ್ಯಾನ್, ಗೂಡ್ಸ್ ವಾಹನ ಸೇರಿದಂತೆ ಯಾವ ಖಾಸಗಿ ಸಾರಿಗೆ ವಾಹನವೂ ರಸ್ತೆಗೆ ಇಳಿಯಲಿಲ್ಲ. ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಆಟೋ ನಿಲ್ದಾಣದಲ್ಲಿ ಒಂದು ಆಟೋ ಕೂಡ ಕಂಡು ಬರಲಿಲ್ಲ.
ಮುಂಜಾನೆಯೇ ಬೇರೆ, ಬೇರೆ ಊರುಗಳಿಂದ ಮೆಜೆಸ್ಟಿಕ್ಗೆ ಆಗಮಿಸುತ್ತಿರುವ ಜನರು ಆಟೋಗಳು ಇಲ್ಲದೆ ಬಿಎಂಟಿಸಿ ಬಸ್ ಗಳತ್ತ ಮುಖ ಮಾಡಿದರು ಲಗೇಜ್ ಹೆಚ್ಚಾಗಿದ್ದು, ಬಸ್ನಲ್ಲಿ ಹೋಗಲು ಆಗದೇ, ಆಟೋ ಬೇಕು ಎನ್ನುವ ಪ್ರಯಾಣಿಕರಿಗೆ ಭಾರಿ ಸಮಸ್ಯೆ ಎದುರಾಯಿತು.
ಚಾಲಕರ ಮೆರವಣಿಗೆ:
ಮುಷ್ಕರ ನಿರತರು ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು, ಮಡಿವಾಳದಿಂದ ಫ್ರೀಡಂಪಾರ್ಕ್ವರೆಗೆ ಮೆರವಣಿಗೆ ನಡೆಸಿದರು.
ಚಾಲಕರಿಗೆ ಮೊಟ್ಟೆ ಎಸೆತ:
ಈ ನಡುವೆ ಬಂದ್ಗೆ ಬೆಂಬಲ ನೀಡದೇ ರಸ್ತೆಗಿಳಿದ ಕೆಲವು ಕ್ಯಾಬ್ಗೆ ಚಾಲಕರಿಗೆ ಪ್ರತಿಭಟನಾ ನಿರತರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ.