ಬೆಂಗಳೂರು,ಮಾ.18- ಕಾಮಗಾರಿ, ಟೋಲ್ ಸೇರಿದಂತೆ ಹಲವು ಕಾರಣಗಳಿಂದ ಸುದ್ದಿಯಾಗಿರುವ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿಯ ವಾಸ್ತವ ಪರಿಸ್ಥಿತಿ ಅನಾವರಣಗೊಂಡಿದೆ.
ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ನೀರು ನಿಂತಿದ್ದು, ಕೆರೆಯಂತಾಗಿದೆ.
ರಾಮನಗರದ ತಾಲೂಕಿನ ಸಂಗಬಸವನದೊಡ್ಡಿ ಮೇಲ್ಸೇತುವೆ ಬಳಿಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದೆ.ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ನಿಂತಿರುವ ಮಳೆ ನೀರಿನಲ್ಲಿ ಹಲವು ವಾಹನಗಳು ಮುಳುಗಡೆಯಾಗಿ ಸವಾರರು ಪರದಾಡಿದರು ಅಲ್ಲದೇ ಕೆಲವೊಂದಿಷ್ಟು ವಾಹನಗಳು ರಸ್ತೆಯಲ್ಲಿ ಕೆಟ್ಟು ನಿಂತಿವೆ ಎಂದು ತಿಳಿದು ಬಂದಿದೆ.
ಕಳೆದ ವರ್ಷವೂ ಮಳೆ ಸಂದರ್ಭ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ನಿನ್ನೆ ಸುರಿದ ಮಳೆಗೆ ರಸ್ತೆ ಮೇಲೆ ನೀರು ನಿಂತಿದ್ದು, ವಾಹನ ದಟ್ಟಣೆ ಉಂಟಾಗಿದೆ. ಇದು ವಾಹನ ಸವಾರರ ಆಕ್ರೋಶಕ್ಕೂ ಕಾರಣವಾಗಿದೆ.
ಈ ಬಗ್ಗೆ ವಾಹನ ಸವಾರ ವಿಕಾಸ್ ಎಂಬುವವರು ಮಾತನಾಡಿ, “ರಸ್ತೆ ಮೇಲೆ ಹೆಚ್ಚಿನ ನೀರು ನಿಂತ ಹಿನ್ನೆಲೆ ವಾಹನಗಳು ಓಡಾಟಕ್ಕೆ ತೊಂದರೆ ಉಂಟಾಗಿದೆ. ನೀರು ನಿಂತ ಹಿನ್ನೆಲೆ ವಾಹನ ರಸ್ತೆ ಮಧ್ಯದಲ್ಲೆ ಕೆಟ್ಟು ನಿಂತಿದೆ. ಈ ವೇಳೆ ಹಿಂದಿನಿಂದ ಬಂದ ವಾಹನ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ವಾಹನ ಜಖಂ ಗೊಂಡಿದೆ. ಇದಕ್ಕೆ ಪರಿಹಾರ ಕೊಡಬೇಕೆಂದು ಸಿಎಂಗೆ ಮನವಿ ಮಾಡುವುದಾಗಿ” ಹೇಳಿದರು.
ಮತ್ತೊಬ್ಬ ವಾಹನ ಸವಾರ ನಾಗರಾಜು ಎಂಬುವವರು ಮಾತನಾಡಿ, “ನಿನ್ನೆ ರಾತ್ರಿ ಸುರಿದ ಮಳೆಗೆ ಈ ರಸ್ತೆಯಲ್ಲಿ ಸುಮಾರು ವಾಹನ ಸವಾರರು ಸಂಕಷ್ಟ ಅನುಭವಿಸಿದ್ದಾರೆ. ನನ್ನ ವಾಹನದ ಇಂಜಿನ್ ಒಳಗಡೆ ನೀರು ಹೋದ ಕಾರಣ ವಾಹನ ಕೆಟ್ಟು ನಿಂತಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕಾಗಿದೆ ಎಂದು ವಾಹನ ಸವಾರ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಮಾ.12ನೇ ತಾರೀಖಿನಂದು ಬೆಂಗಳೂರು ಮೈಸೂರ ಎಕ್ಸ್ಪ್ರೆಸ್ ವೇ ಗೆ ಪ್ರಧಾನಿ ಮೋದಿ ಮಂಡ್ಯ ಜಿಲ್ಲೆಯಲ್ಲಿ ಚಾಲನೆ ನೀಡಿದ್ದರು