ವಿದ್ಯಾರ್ಥಿಯ ಮದುವೆ ಮುರಿಯುವ ಉದ್ದೇಶದಿಂದ ಆಕೆಯ ಖಾಸಗಿ ಫೋಟೋಗಳನ್ನು ಹಂಚಿಕೊಂಡ ದೈಹಿಕ ಶಿಕ್ಷಣ ಶಿಕ್ಷಕನ ವಿರುದ್ಧ ಬೆಳಗಾವಿ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ 44 ವರ್ಷದ ಶಿಕ್ಷಕ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿದ್ದ. ಮದುವೆಯಾಗುವುದಾಗಿ ಭರವಸೆ ನೀಡಿದ ಬಳಿಕ ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ಆರೋಪಿ ಶಿಕ್ಷಕ ಅವಳೊಂದಿಗೆ ಖಾಸಗಿ ಕ್ಷಣಗಳ ಫೋಟೋಗಳನ್ನೂ ತೆಗೆದುಕೊಂಡಿದ್ದ.
ಇದೇ ವೇಳೆ ಬಾಲಕಿಯ ಮನೆಯವರು ಬೇರೊಬ್ಬ ವ್ಯಕ್ತಿಯೊಂದಿಗೆ ಬಾಲಕಿಯ ಮದುವೆ ನಿಶ್ಚಯಿಸಿದ್ದಾರೆ. ಆಕೆಯ ಮದುವೆ ತಡೆಯಲು ಯುವತಿಯ ಖಾಸಗಿ ಛಾಯಾಚಿತ್ರಗಳನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದ ಆರೋಪಿ ಅದನ್ನು ವೈರಲ್ ಮಾಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಶಾಲೆಯಲ್ಲೇ ಆರೋಪಿ ಶಿಕ್ಷಕನಿಗೆ ಥಳಿಸಿದ್ದಾರೆ. ಅಲ್ಲದೇ ಆತನನ್ನು ಠಾಣೆಗೆ ಎಳೆದೊಯ್ದು ದೂರು ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಬಿಕಾಂ ಓದುತ್ತಿರುವ ಕಾಲೇಜು ಹುಡುಗಿಯನ್ನು ಲೈಂಗಿಕವಾಗಿ ಬಳಸಿಕೊಂಡದ್ದಕ್ಕಾಗಿ ಸವಣೂರು ಪೊಲೀಸರು ಸಹಾಯಕ ಪ್ರಾಧ್ಯಾಪಕರ ವಿರುದ್ಧ ಐಪಿಸಿ ಸೆಕ್ಷನ್ 376 (2) (ಎನ್) ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಬೋಧಿಸುತ್ತಿದ್ದ ಆರೋಪಿ ನಿಂಗಪ್ಪ ಕಲಕೋಟಿ ಟ್ಯೂಷನ್‌ಗೆಂದು ಬಂದ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದು, ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.