ಉದ್ಯಮಿ ಹಾಗೂ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ.
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆಸುತ್ತಿರುವ ಅವರು ಮಾಡಿಕೊಂಡ ಸಣ್ಣ ಎಡವಟ್ಟಿನ ಕಾರಣಕ್ಕಾಗಿ ಅವರ ನಾಮಪತ್ರ ತಿರಸ್ಕೃತ ಗೊಳ್ಳುವ ಸಾಧ್ಯತೆ ಇದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವ ಅವರ ಕನಸು ಭಗ್ನವಾಗಲಿದೆ ಎಂದು ಎಣಿಸಲಾಗುತ್ತಿದೆ.
ರಾಜೀವ್ ಚಂದ್ರಶೇಖರ್ ತಿರುವನಂತಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನೇಮಂ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರದ ಜೊತೆಗೆ ಅವರು ಸಲ್ಲಿಸಿರುವ ದಾಖಲೆಗಳಲ್ಲಿ ಕೆಲವು ಅಂಶಗಳನ್ನು ಮರೆಮಾಡಿರುವುದು ಅವರಿಗೆ ಈಗ ಸಂಕಷ್ಟ ತಂದ್ಬಿಟ್ಟಿದೆ, ರಾಜೀವ್ ಚಂದ್ರಶೇಖರ್ ಅವರು ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 93 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ನಾಮಪತ್ರದ ಜೊತೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ರಾಜೀವ್ ಚಂದ್ರಶೇಖರ್, ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ವಿವರವನ್ನು ಮರೆಮಾಚಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನಲ್ಲಿರುವ ಸುಮಾರು 200 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿಲ್ಲ. ಈ ಸಂಬಂಧ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇದರಿಂದಾಗಿ ನಾಮಪತ್ರ ಅಸಿಂಧುಗೊಳ್ಳುವುದೇ ಎಂಬ ಪ್ರಶ್ನೆ ಮೂಡಿದೆ.
ರಾಜೀವ್ ಅವರು 107 ಕೋಟಿಗೂ ಅಧಿಕ ಸಾಲ ಹೊಂದಿದ್ದು, ಇವರ ಪತ್ನಿ ಹೆಸರಿನಲ್ಲಿ 1.62 ಕೋಟಿ ಸಾಲ ಇದೆ. 2024-25ರ ಆದಾಯ ತೆರಿಗೆ ಪ್ರಕಾರ ರಾಜೀವ್ ಅವರ ಆದಾಯವು 92.91 ಕೋಟಿ ಇದ್ದು, ಪತ್ನಿಯ ಆದಾಯವು 60.50 ಕೋಟಿ ಇದೆ.
ಒಟ್ಟು ಚರಾಸ್ತಿಯ ಮೌಲ್ಯ 78.81 ಕೋಟಿ ಇದ್ದರೆ, ಸ್ತಿರಾಸ್ತಿಯ ಮೌಲ್ಯವು 15.07 ಕೋಟಿಗೂ ಅಧಿಕವಿದೆ. ರಾಜೀವ್ ಅವರು ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದಾರೆ. ಈ ಎಲ್ಲವನ್ನು ಅವರು ಪ್ರತಿ ವರ್ಷ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ತೆರಿಗೆ ದಾಖಲೆಗಳಲ್ಲಿ ಬಹಿರಂಗವಾಗಿದೆ.
ಆದರೆ ಅವರು ಬೆಂಗಳೂರಿನಲ್ಲಿ ಹೊಂದಿರುವ ಮನೆಯ ವಿವರವನ್ನು ನಾಮಪತ್ರದ ಜೊತೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಘೋಷಿಸಿಲ್ಲ.
ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ಮನೆಯನ್ನು ಅಭ್ಯರ್ಥಿಯ ನಿವಾಸವೆಂದು ಘೋಷಿಸಲಾಗಿತ್ತು. ಈಗ ಆ ಆಸ್ತಿ ವಿವರಗಳನ್ನು ಮರೆಮಾಚಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಫಿಡವಿಟ್ ಮತ್ತು ಕರ್ನಾಟಕ ಸರ್ಕಾರದ ಆಸ್ತಿ ತೆರಿಗೆ ದಾಖಲೆಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ’ ಎಂದು ಕೇರಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಣಕ್ಕಾಡ್ ಸುರೇಶ್ ಹೇಳಿದ್ದಾರೆ.
ರಾಜೀವ್ ಚಂದ್ರಶೇಖರ್ ಅವರು ತಮ್ಮ 200 ಕೋಟಿ ಮೌಲ್ಯದ ಆಸ್ತಿಯನ್ನು ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ. ನಾಮಪತ್ರ ಪರಿಶೀಲನೆ ವೇಳೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತೇವೆ. ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ. ಈ ದೂರು ಸ್ವೀಕರಿಸಿರುವ ಆಯೋಗ ಅದರ ಪರಿಶೀಲನೆ ಆರಂಭಿಸಿದ್ದು ಅದರ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆ ಇದೆ.

