ಬೆಳಗಾವಿ.
ರಾಜ್ಯ ರಾಜಕಾರಣದಲ್ಲಿ ದಕ್ಷಿಣದ ಬೆಂಗಳೂರು ಮತ್ತು ಉತ್ತರದ ಬೆಳಗಾವಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಇಲ್ಲಿನ ವಿಧಾನಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿರುವಂತೆ ನಾಯಕರಲ್ಲಿ ಪಕ್ಷ ನಿಷ್ಠೆಗಿಂತ ಪ್ರತಿಷ್ಠೆ, ವ್ಯಕ್ತಿಗತ ಸ್ನೇಹ, ದ್ವೇಷ, ಒಳ ಒಪ್ಪಂದಗಳೇ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಪಕ್ಷ ಸಿದ್ಧಾಂತ, ಅಲೆಯನ್ನು ಗಮನಿಸಿ ಇಲ್ಲಿನ ಫಲಿತಾಂಶಗಳ ಜಾಡು ಹಿಡಿಯುವುದು ಸ್ವಲ್ಪ ಕಷ್ಟವೇ.
ಅದರಲ್ಲೂ ಬೆಳಗಾವಿಯಲ್ಲಂತೂ ಇದು ಇನ್ನೂ ಕಷ್ಟ. ಒಂದು ಚುನಾವಣೆಯಲ್ಲಿದ್ದ ಮೈತ್ರಿ, ಹೊಂದಾಣಿಕೆ ಮತ್ತೊಂದು ಚುನಾವಣೆಯಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿರುತ್ತದೆ. ಸದ್ಯ ಈ ಬೆಳಗಾವಿಯಲ್ಲಿ ಇದೀಗ ಹೆಚ್ಚು ಸದ್ದು ಮಾಡುತ್ತಿರುವ ಹೆಸರು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹಾಗೂ ರಮೇಶ್ ಜಾರಕಿಹೊಳಿ (Ramesh Jarkiholi) ಹಾಗೆಯೇ ಬೆಳಗಾವಿ ಗ್ರಾಮೀಣ ಮತ್ತು ಗೋಕಾಕ್ ಕ್ಷೇತ್ರ.
2018ರ ಚುನಾವಣೆಯಲ್ಲಿ ಹೆಬ್ಟಾಳ್ಕರ್ ಪರ ನಿಂತು ಚುನಾವಣೆ ಮಾಡಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್, ಈಗ ಅದೇ ಹೆಬ್ಟಾಳ್ಕರ್‌ಸೋಲಿಸಲು ಪಣತೊಟ್ಟಿದ್ದಾರೆ. ಇದು ತಮ್ಮ ಏಕೈಕ ಅಜೆಂಡಾ ಎನ್ನುವಂತೆ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಿರಂತರ ಸಂಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಮರಾಠಾ ಸಮುದಾಯದ ಜನರನ್ನು ಸೇರಿಸಿ ಸಭೆಗಳನ್ನು ಮಾಡುತ್ತಿದ್ದಾರೆ. ಮತದಾರರಿಗೆ ಬಹಿರಂಗವಾಗಿಯೇ ಹಣ ಮತ್ತು ಕಾಣಿಕೆಯ ಆಮಿಷ ತೋರಿಸುತ್ತಿದ್ದಾರೆ.
ಇದಕ್ಕೆ ಮೇಲ್ನೋಟಕ್ಕೆ ಅವರು ನೀಡುತ್ತಿರುವ ಕಾರಣ ಕಳೆದ ಮೂರು ವರ್ಷಗಳ ಹಿಂದೆ ನಡೆದ ಪಿಎಲ್ ಡಿ ಬ್ಯಾಂಕ್ (PLD Bank) ಚುನಾವಣೆ. ಇದರಲ್ಲಿ ತಮ್ಮ ವಿರುದ್ಧ ಹೆಬ್ಬಾಳ್ಕರ್ ಕೆಲಸ ಮಾಡಿದ್ದರು, ಇದು ತನ್ನ ಕೋಪಕ್ಕೆ ಕಾರಣ ಎಂದು ಸಾಹುಕಾರ್ ಜಾರಕಿಹೊಳಿ ಹೇಳುತ್ತಾ ಓಡಾಟ ನಡೆಸಿದ್ದಾರೆ. ಹಾಗೆ ನೋಡಿದರೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಸ್ನೇಹ ಮತ್ತು ಆತ್ಮೀಯತೆಗೆ ಧಕ್ಕೆ ಬರಲು ಕೇವಲ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಯೊಂದೇ ಕಾರಣವಲ್ಲ. ಅದು ನೆಪ ಅಷ್ಟೇ. ಕಾರಣಗಳೇ ಬೇರೆ ಎಂಬುದು ಅವರ ಆಪ್ತರ ಮಾತು. ಇದರ ಜೊತೆಗೆ ಮುಖ್ಯವಾಗಿ ಜಿಲ್ಲೆಯ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ (DK Shivakumar) ಅವರ ನೇರ ಹಸ್ತಕ್ಷೇಪ ರಮೇಶ್ ಅವರ ಮುನಿಸಿಗೆ ಕಾರಣವಾಯಿತು. ಇದು ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪಷ್ಟವಾಗಿ ಎದ್ದುಕಂಡಿತು. ಇದಾದ ಬಳಿಕ ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ಸಾಮರ್ಥ್ಯ ತೋರಿಸಲು ತೊಡೆತಟ್ಟಿ ನಿಂತಿದ್ದಾರೆ.
ಶಿವಕುಮಾರ್ ಹಾಗೂ ಹೆಬ್ಬಾಳ್ಕರ್ ಮೇಲಿನ ಅವರ ಸಿಟ್ಟು JDS ಮತ್ತು Congress ಮೈತ್ರಿ ಸರಕಾರಕ್ಕೆ ಶಾಪವಾಗಿ ಪರಿಣಮಿಸಿತು. ಹೆಬ್ಬಾಳ್ಕರ್ ಮೇಲಿನ ಸಿಟ್ಟು ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿತು. ಮುಂದೆ ನಡೆದಿದ್ದೆಲ್ಲಾ ಈಗ ಇತಿಹಾಸ. ಇದೀಗ ರಮೇಶ್ ಜಾರಕಿಹೊಳಿ ತಮ್ಮ ಗೋಕಾಕ್ (Gokak) ಕ್ಷೇತ್ರಕ್ಕಿಂತ ಹೆಬ್ಬಾಳ್ಕರ್ ಪ್ರತಿನಿಧಿಸುತ್ತಿರುವ ಬೆಳಗಾವಿ (Belagavi) ಗ್ರಾಮೀಣ ಕ್ಷೇತ್ರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ಮಾಡುತ್ತಿರುವ ರಮೇಶ್, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರವನ್ನು BJP ವಶ ಮಾಡಿಕೊಳ್ಳುವ ಸವಾಲು ಹಾಕಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆ ನಿಶ್ಚಿತ. ನಾನೇ ಖುದ್ದು ಇದರ ಉಸ್ತುವಾರಿ ವಹಿಸಿಕೊಂಡು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದ ಹಲವೆಡೆ ಸಂಚಾರ ಮಾಡುತ್ತಿದ್ದಾರೆ. ಹಲವು ಮುಖಂಡರ ಮನೆ ಬಾಗಿಲಿಗೆ ಎಡತಾಕುತ್ತಾ BJP ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ. ಇಲ್ಲಿ BJP ಗೆಲ್ಲಬೇಕು ಎನ್ನುವುದಕ್ಕಿಂತ ಹೆಬ್ಬಾಳ್ಕರ್ ಸೋಲಬೇಕು ಎಂಬುದು ಅವರ ಏಕೈಕ ಗುರಿ. ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸಮಯದಲ್ಲಿ ಆರಂಭವಾದ ಈ ರಾಜಕೀಯ ದ್ವೇಷ ಈಗ ಪರಾಕಾಷ್ಠೆಗೆ ಬಂದು ನಿಂತಿದೆ. ಪರಸ್ಪರ ಆರೋಪ, ಟೀಕಾ ಪ್ರಹಾರ ರಾಜಕೀಯದ ಗಡಿ ಮೀರಿವೆ. ಒಮ್ಮೊಮ್ಮೆ ಜವಾಬ್ದಾರಿ ಮರೆತು ವೈಯಕ್ತಿಕ ಟೀಕೆಗಳು ಕೇಳಿ ಬರುತ್ತಿವೆ.
ರಮೇಶ್ ಜಾರಕಿಹೊಳಿ ಈ ಕ್ಷೇತ್ರದಿಂದ ತಮ್ಮ ಆಪ್ತ ನಾಗೇಶ ಮನ್ನೋಳ್ಕರ್ (Nagesh Mannolkar) ಅವರಿಗೆ BJP ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದಾರೆ.