ಬೆಂಗಳೂರು, ಮಾ.13- ರಾಜಧಾನಿ ಮಹಾನಗರಿ ಬೆಂಗಳೂರನ್ನು ಬೆಚ್ಚಿಬೀಳಿಸಿದ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್ ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಅಧಿಕಾರಿಗಳು ಬಳ್ಳಾರಿಯಲ್ಲಿ ಶಂಕಿತನೊಬ್ಬನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎನ್‌ಐಎ ತಂಡಬಬಳ್ಳಾರಿಯ ಟ್ಯಾಂಕ್ ಬಂಡ್ ರೋಡ್ ಗಲ್ಲಿಯ ಮೋತಿ ಸಮೀಪದ ಹೊಸ ಬಸ್ ನಿಲ್ದಾಣದ ಬಳಿ ನೆಲೆಸಿರುವ ಶಬ್ಬೀರ್ ಎಂಬಾತನನ್ನು ವಶಕ್ಕೆ ಪಡೆದಿದೆ.
ಬಳ್ಳಾರಿಯಲ್ಲಿ ವಾಸಿಸುತ್ತಿರುವ ಈತ ತೋರಣಗಲ್ ನ ಜಿಂದಾಲ್ ಕಂಪನಿಯ ಎಲೆಕ್ಟ್ರಿಕಲ್ ಉದ್ಯೋಗಿ ಎಂದು ಗುರುತಿಸಲಾಗಿದೆ.
ಈತನಿಗೂ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟಕ್ಕೂ ಅತ್ಯಂತ ನಿಕಟವಾದ ಸಂಬಂಧ ಇರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಬಾಂಬ್ ಸ್ಫೋಟದ ಸಂಬಂಧ ಕೆಲ ದಿನಗಳ ಹಿಂದಷ್ಟೇ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದ್ದು,ಆತ ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಮೋತಿ ಸಮೀಪದ ಹೊಸ ಬಸ್ ನಿಲ್ದಾಣದ ದಾರಿಯಲ್ಲಿರುವ ಮನೆಯಿಂದ ಬುಧವಾರಬೆಳಗಿನ ಜಾವ 4 ಗಂಟೆ ಸುಮಾರಿಗೆ ಶಬ್ಬೀರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಶಂಕಿತ ಶಬ್ಬೀರ್ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ನಡೆಸಿದವನಿಗೆ ಕರೆ ಮಾಡಿರುವುದು ಎನ್ ಐಎ ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ.
ಕಳೆದ ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಉಗ್ರ ಬೆಂಗಳೂರಿನಿಂದ ತಪ್ಪಿಸಿಕೊಂಡು ತುಮಕೂರು ಮೂಲಕ ಬಳ್ಳಾರಿಗೆ ಹೋಗಿದ್ದ ಎಂದು ಹೇಳಲಾಗಿದೆ.
ಆ ಸಂದರ್ಭದಲ್ಲಿ ಕೌಲ್ ಬಜಾರ್ ಗೆ ಬಂದಿದ್ದ ಆತ ಶಬ್ಬೀರ್‌ನನ್ನು ಭೇಟಿ ಮಾಡಿದ್ದ ಎಂದು ಹೇಳಲಾಗಿದೆ. ಇದಾದ ನಂತರ ಆತ ಹೈದರಾಬಾದ್ ಗೆ ಪ್ರಯಾಣಿಸಿದ್ದುಆತನಿಗೆ ಹೈದರಾಬಾದ್‌ಗೆ ಹೋಗಲು ಶಬ್ಬೀರ್ ಸಹಾಯ ಮಾಡಿರುವುದು ಗೊತ್ತಾಗಿದೆ.
ಸದ್ಯ ಬಾಂಬ್ ಸ್ಪೋಟದ ಶಂಕಿತ ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಎನ್ ಐ ಎ ತಂಡ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದ್ದು ಆತನಿಗಾಗಿ ಹುಡುಕಾಟ ನಡೆಸಿದೆ.
ಸದ್ಯ ಎನ್ ಐ ಎ ವಶದಲ್ಲಿದ್ದ ಶಬ್ಬೀರ್ ಶಂಕಿತ ಉಗ್ರನೊಂದಿಗೆ ಸಂಪರ್ಕ ಹೊಂದಿರವ ಮಾಹಿತಿ ಲಭ್ಯವಾಗಿದೆ. ಪ್ರಾಥಮಿಕ ವಿಚಾರಣೆಯ ಬಳಿಕ ನಗರಕ್ಕೆ ಕರೆತಂದಿರುವ ಎನ್ ಐ ಎ ಅಧಿಕಾರಿಗಳು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದ ಆಳಕ್ಕಿಳಿದಿರುವ ತನಿಖಾ ತಂಡ ಬಳ್ಳಾರಿಯಲ್ಲಿ ಹಳೆ ಕೇಸ್‌ಗಳಲ್ಲಿ ಬಂಧನವಾಗಿರುವ ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಜತೆಗೆ ನಾಪತ್ತೆಯಾಗಿರುವ ಆರೋಪಿಗಳ ಕುಟುಂಬಸ್ಥರನ್ನೂ ವಿಚಾರಣೆ ಮಾಡಲಾಗುತ್ತಿದೆ.
ಬಳ್ಳಾರಿಯ ಶಂಕಿತ ಉಗ್ರ ಮಿನಾಜ್ ಅಲಿಯಸ್ ಸುಲೈಮಾನ್, ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಶೇಖ್, ದೆಹಲಿಯ ಶಯಾನ್ ರೆಹಮಾನ್ ಅಲಿಯಾಸ್ ಹುಸೈನ್‌ನನ್ನು ನ್ಯಾಯಾಲಯದ ಆದೇಶದ ಮೇರೆಗೆ ವಶಕ್ಕೆ ಪಡೆದು, ಎನ್‌ಐಎ ವಿಚಾರಣೆ ಮಾಡುತ್ತಿದೆ.
ಬಳ್ಳಾರಿಯಲ್ಲೇ ಮೊಕ್ಕಾಂ:
ಬಳ್ಳಾರಿ ಮೂಲದ ಶಂಕಿತ ಉಗ್ರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಿನಾಜ್ ಅಲಿಯಾಸ್ ಸುಲೈಮಾನ್ ಬಾಂಬ್ ಸ್ಫೋಟದ ರೂವಾರಿ ಇರಬಹುದು ಎನ್ನುವ ಶಂಕೆಯಿದ್ದ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲೇ ಬೀಡು ಬಿಟ್ಟು ಶಬ್ಬೀರ್ ನನ್ನು ಬಂಧಿಸಿದ್ದಾರೆ.
1 Comment
Интеграция мультимедийных систем Интеграция мультимедийных систем .