ಬೆಂಗಳೂರು,ಸೆ. 2. – ರಾಜ್ಯ ಸರ್ಕಾರದ ಸಚಿವರು ತಮ್ಮ ಮಾತು ಕೇಳುತ್ತಿಲ್ಲ.ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದ್ದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಇದೀಗ ಮತ್ತೊಂದು ಪತ್ರದ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಇಂಧನ ಇಲಾಖೆಯ ಕಾರ್ಯವೈಖರಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದಿರುವ ರಾಯರೆಡ್ಡಿ ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ನಿಯಂತ್ರಣವಿಲ್ಲ.ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳುವ ತಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಪೂರೈಕೆಗೆ ಹಾಕಲಾಗಿರುವ ವಿದ್ಯುತ್ ಪರಿವರ್ತಕಗಳು ಹಾಳಾಗಿದ್ದು ಇದನ್ನು ಬದಲಾಯಿಸುವ ಹಾಗೂ ದುರಸ್ತಿ ಕುರಿತಾದ ತಮ್ಮ ಮನವಿಗೆ ಜೆಸ್ಕಾಂನ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.ಹಿರಿಯ ಶಾಸಕನ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ ಈ ಬಗ್ಗೆ ಚರ್ಚಿಸಲು ಇಂಧನ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಅಸಮಾಧಾನ ವಿಲ್ಲ:
ಇನ್ನು ಶಾಸಕ ರಾಯರೆಡ್ಡಿ ಅವರ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಶಿವಕುಮಾರ್
ಯಾವ ಶಾಸಕರಲ್ಲೂ ಅಸಮಾಧಾನ ಆಕ್ರೋಶ ಇಲ್ಲ ಅವರು ಸಮಸ್ಯೆಗಳನ್ನು ಪತ್ರ ಮುಖೇನ ಹೇಳಿಕೊಂಡರೆ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಯಾವ ಶಾಸಕರಲ್ಲೂ ಅಸಮಾಧಾನವಿಲ್ಲ, ಅವರ ಸಮಸ್ಯೆಗಳನ್ನು ಹೇಳಿಕೊಳ್ಳುವುದು ತಪ್ಪೇನಿಲ್ಲ ಅದನ್ನೇ ಶಾಸಕರ ಆಕ್ರೋಶ, ಅಸಮಾಧಾನ ಎಂದೆಲ್ಲ ಬಿಂಬಿಸಬೇಡಿ ಎಂದು ಹೇಳಿದರು.
ಶಾಸಕರುಗಳಿಗೆ ಅವರದೇ ಆದ ಸಮಸ್ಯೆಗಳಿರುತ್ತವೆ ಅದನ್ನು ಹೇಳಬಾರದಾ. ಅದಕ್ಕೆ ಏನೇನೋ ಸೃಷ್ಟಿ ಮಾಡುವುದು ಬೇಡ, ಶಾಸಕರು ನೋವು ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಪಕ್ಷದಲ್ಲಿ ಶಿಸ್ತು ಇದೆ ಅದರಂತೆ ಎಲ್ಲರೂ ನಡೆದುಕೊಳ್ಳುತ್ತಿದ್ದಾರೆ ಎಂದರು