ಮುಂಬೈ: ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಮತ್ತೊಮ್ಮೆ ಹೆಚ್ಚಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಹಣಕಾಸು ನೀತಿ ಬಿಡುಗಡೆ ಮಾಡಿದ್ದು, ರೆಪೊ ದರವನ್ನು ಶೇ 0.50ರಷ್ಟು ಹೆಚ್ಚಿಸುತ್ತಿರುವುದಾಗಿ ಘೋಷಿಸಿದರು. ಇದರೊಂದಿಗೆ ಪರಿಷ್ಕೃತ ರೆಪೊ ದರ ಈಗ ಶೇ. 4.90 ಆಗಿದೆ.
ಈ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ಹಣದುಬ್ಬರ ಪ್ರಮಾಣ ಶೇ 6ರ ಮೇಲಿರಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಆರ್‌ಬಿಐ ಮೇ 4ರಂದು ರೆಪೊ ದರವನ್ನು ಶೇ 0.40 ರಷ್ಟು ಹೆಚ್ಚಿಸಿತ್ತು. ಈಗಿನ ದರ ಹೆಚ್ಚಳದಲ್ಲೂ ಇದೇ ಉದ್ದೇಶ ಅಡಗಿದೆ ಎಂದು ಆರ್‌ಬಿಐ ಹೇಳಿದೆ. ಈ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರ ಶೇ 7.2ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.