ಬೆಂಗಳೂರು – ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಅನುಷ್ಠಾನ ಸಂಬಂಧ ಮಹತ್ವದ ತೀರ್ಮಾನವನ್ನು ಇಂಧನ ಇಲಾಖೆ ಕೈಗೊಂಡಿದೆ.
ಮಾಸಿಕ ಸರಾಸರಿ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜೋತಿ ಯೋಜನೆ ಎಲ್ಲಾ ಗೃಹಬಳಕೆ ಗ್ರಾಹಕರಿಗೆ ಲಭಿಸಬೇಕು ಎನ್ನುವುದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿಲುವಾಗಿದೆ ಆದರೆ ಈ ವಿಷಯದಲ್ಲಿ ಬಾಡಿಗೆ ಮನೆಗಳ ನಿವಾಸಿಗಳ ಕುರಿತಾಗಿ ಕೆಲವು ಗೊಂದಲಗಳು ಉಂಟಾಗಿದೆ ಇದನ್ನು ಪರಿಹರಿಸುವ ದೃಷ್ಟಿಯಿಂದ ಸಚಿವ ಜಾರ್ಜ್ ಅವರು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಜೊತೆ ಸಮಾಲೋಚನೆ ನಡೆಸಿ ಹೊಸ ನೀತಿಯೊಂದನ್ನು ಸಿದ್ಧಪಡಿಸಿದ್ದಾರೆ.
ಬಾಡಿಗೆ ಮನೆಯಲ್ಲಿ ವಾಸಿಸುವವರು ಹೆಚ್ಚು ಕಾಲದವರೆಗೆ ಒಂದೇ ಕಡೆ ವಾಸ ಮಾಡುವುದಿಲ್ಲ ನಿಯಮಿತವಾಗಿ ಮನೆ ಬದಲಾವಣೆ ಮಾಡುವುದರಿಂದ ಇವರ ವಿದ್ಯುತ್ ಬಳಕೆಯ ವಾರ್ಷಿಕ ಲೆಕ್ಕಾಚಾರ ಸಾಧ್ಯವಾಗುವುದಿಲ್ಲ ಈ ತಾಂತ್ರಿಕ ದೊಡಕನ್ನು ಅಧಿಕಾರಿಗಳು ಮುಂದಿಟ್ಟಿದ್ದು ಸಚಿವ ಜಾರ್ಜ್ ಅವರು ಸತತ ಸಮಾಲೋಚನೆ ಬಳಿಕ ಇದಕ್ಕೊಂದು ಪರಿಹಾರ ರೂಪಿಸಿದ್ದಾರೆ
ಈ ಪರಿಹಾರ ಸೂತ್ರದ ಬಗ್ಗೆ ಸಚಿವ ಜಾರ್ಜ್ ಸುದ್ದಿಗಾರರಿಗೆ ಮಾಹಿತಿ ನೀಡಿದರು
ಈ ರೀತಿಯ ಗ್ರಾಹಕರಿಗೆ ವಿದ್ಯುತ್ ಬಳಕೆಯ ಸರಾಸರಿಯನ್ನು ತಿಂಗಳಿಗೆ 53 ಯೂನಿಟ್ ನಿಗದಿ ಮಾಡಿದ್ದು, ಅದಕ್ಕೆ ಶೇ 10 ರಷ್ಟು ಯೂನಿಟ್ ಸೇರಿಸಲಾಗುವುದು. ಅಂದರೆ, ಒಟ್ಟು 58 ರಿಂದ 59 ಯೂನಿಟ್‌ಗಳಷ್ಟು ಉಚಿತ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದರು.
ಸರಾಸರಿ ಅಂದಾಜು ಸಿಗದಿರುವ, ಹೊಸದಾಗಿ ಬಾಡಿಗೆ ಮನೆ ಮಾಡುವವರಿಗೆ ಅನ್ವಯವಾಗುವಂತೆ ಈ ಸೂತ್ರ ಜಾರಿಗೆ ತರಲಾಗಿದೆ. ಒಂದು ವರ್ಷದ ಅವಯ ಅಂದರೆ 2022ರ ಏಪ್ರಿಲ್ 1ರಿಂದ 2023ರ ಮಾರ್ಚ್ 31ರ ಮಾಸಿಕ ಸಾಲಿನಲ್ಲಿ ಬಳಸಲಾದ ವಿದ್ಯುತ್ ಸರಾಸರಿ ಲೆಕ್ಕಾಚಾರದ ಮೇಲೆ ನಿಗದಿ ಮಾಡಲಾಗಿದೆ ಎಂದು ಹೇಳಿದರು.
ಜೂನ್ ಬಳಿಕ ಹೊಸದಾಗಿ ಮನೆ ಕಟ್ಟಿಕೊಂಡು ವಾಸಕ್ಕೆ ಬಂದವರು ಮತ್ತು ಹೊಸದಾಗಿ ಬಾಡಿಗೆ ಮನೆ ಹಿಡಿದವರಿಗೆ ವಿದ್ಯುತ್ ಬಳಕೆಯ ಸರಾಸರಿ ಯಾವ ರೀತಿ ಲೆಕ್ಕ ಹಾಕಲಾಗುತ್ತದೆ ಎಂಬ ಗೊಂದಲವಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟಾರೆ ಗೃಹ ಬಳಕೆಯ ಸರಾಸರಿ ಯೂನಿಟ್‌ಗಳನ್ನು ಗಣನೆಗೆ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು. ರಾಜ್ಯದಲ್ಲಿ ಗೃಹ ವಿದ್ಯುತ್ ಬಳಕೆಯ ಸರಾಸರಿ ಪ್ರಮಾಣ 53 ಯೂನಿಟ್‌ಗಳು. ಅದಕ್ಕೆ ಶೇ 10 ರಷ್ಟು ಯೂನಿಟ್‌ಗಳನ್ನು ಸೇರಿಸಲು ತೀರ್ಮಾನಿಸಲಾಯಿತು ಎಂದು ಅವರು ವಿವರಿಸಿದರು.
ಒಂದು ವೇಳೆ ಈ ಗ್ರಾಹಕರು 58 ಯೂನಿಟ್‌ಗಳಿಂದ 200 ಯೂನಿಟ್‌ವರೆಗೆ ಬಳಕೆ ಮಾಡಿದರೆ, ವ್ಯತ್ಯಾಸದ ಮೊತ್ತವನ್ನು ಅವರೇ ಭರಿಸಬೇಕು. ಸಾಮಾನ್ಯ ಸ್ಲಾಬ್ ಅನ್ವಯ ಬಿಲ್ ಪಾವತಿಸಬೇಕಾಗುತ್ತದೆ.200 ಯೂನಿಟ್‌ಗಿಂತ ಹೆಚ್ಚು ಬಳಸಿದರೆ, ಪೂರ್ತಿ ಬಿಲ್ ಗ್ರಾಹಕರೇ ಪಾವತಿಸಬೇಕಾಗುತ್ತದೆ ಎಂದರು.
Previous Articleಗೃಹಜ್ಯೋತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ?
Next Article Start upಗಳ ಸಾಮೂಹಿಕ ಅವನತಿಯ ಆರಂಭ?