ಬೆಂಗಳೂರು.ಆ,2- ಜನ ಸಾಮಾನ್ಯರ ಇಲಾಖೆ ಎಂದೇ ಪರಿಗಣಿಸಲ್ಪಡುವ ಕಂದಾಯ ಇಲಾಖೆ ಇತ್ತೀಚೆಗೆ ಹೊಸ ಪ್ರಯೋಗಗಳ ಮೂಲಕ ಜನ ಸ್ನೇಹಿಯಾಗುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ.ಇದೀಗ ಇಲಾಖೆಯಲ್ಲಿ ಬಾಕಿ ಉಳಿದಿರುವ ಕಡತಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಂಡಿರುವ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ, ಇಲಾಖೆಯಲ್ಲಿ ಈವರೆಗೆ ಬಾಕಿ ಇದ್ದ 3,900 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಆ ಮೂಲಕ, ಹೆಚ್ಚಿನ ಕಾರ್ಯಕ್ಷಮತೆಯಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತಮ್ಮ ಇಲಾಖೆಯಲ್ಲಿ ಬಾಕಿ ಉಳಿದಿದ್ದ ಕಡತಗಳನ್ನು ವಿಲೇವಾರಿ ಮಾಡಲು ಆದ್ಯತೆ ನೀಡಲಾಗಿದೆ. ಹೊಸದಾಗಿ 2,123 ಕಡತಗಳು ಬಂದಿವೆ. ಈ ಕಡತಗಳನ್ನೂ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದಿದ್ದಾರೆ.
‘ಕಡತಗಳ ವಿಲೇವಾರಿ ವಿಚಾರದಲ್ಲಿ ಕಂದಾಯ ಇಲಾಖೆ ಈವರೆಗೆ ‘ಎ’ ವರ್ಗದ ಕಾರ್ಯಕ್ಷಮತೆ ಪ್ರದರ್ಶಿಸಿಲ್ಲ. ಆದರೆ, ನಾವು ಕಡತ ವಿಲೇವಾರಿ ವಿಚಾರದಲ್ಲಿ ‘ಎ’ ವರ್ಗದ ಜೊತೆಗೆ, ಎಲ್ಲ ಇಲಾಖೆಗಳ ಪೈಕಿ ಎರಡನೇ ಸ್ಥಾನದಲ್ಲಿದ್ದೇವೆ. ದೊಡ್ಡ ಇಲಾಖೆಗಳ ಪೈಕಿ ಮೊದಲ ಸ್ಥಾನದಲ್ಲಿದ್ದೇವೆ’ ಎಂದು ಹೇಳಿದ್ದಾರೆ.
‘ಹಲವು ವರ್ಷಗಳಿಂದ ಬಾಕಿ ಇರುವ ಕಡತಗಳನ್ನು ತ್ವರಿತವಾಗಿ ತೆರವುಗೊಳಿಸುತ್ತೇವೆ. ಅಲ್ಲದೆ, ಪೇಪರ್‌ರಹಿತ ಡಿಜಿಟಲ್ ಸೇವೆ ಸೇರಿದಂತೆ ಏನೆಲ್ಲಾ ಸಾಧ್ಯತೆಗಳಿವೆಯೋ ಅದೆಲ್ಲವನ್ನೂ ಬಳಸಿಕೊಂಡು ಅತ್ಯಂತ ವೇಗವಾಗಿ ಕಡತಗಳನ್ನು ವಿಲೇವಾರಿ ಮಾಡಲು ಇಲಾಖೆ ಬದ್ಧವಾಗಿದೆ. ಉತ್ತಮ ಆಡಳಿತ ನಮ್ಮ ಗುರಿ’ ಎಂದಿದ್ದಾರೆ.
‘ಕಂದಾಯ ಇಲಾಖೆ ಎಲ್ಲ ಇಲಾಖೆಗಳ ಮಾತೃ ಇಲಾಖೆ. ದೊಡ್ಡ ಇಲಾಖೆಯೂ ಹೌದು. ಹೀಗಾಗಿ ಕಡತಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಲೇ ಇರುತ್ತದೆ. ಪರಿಣಾಮ ಇಲಾಖೆ ಸಿಬ್ಬಂದಿಗೆ ಕೆಲಸದ ಒತ್ತಡವೂ ಹೆಚ್ಚು. ಹೀಗಾಗಿ, ಹಲವು ಕಡತಗಳು ವಿಲೇವಾರಿಯಾಗದೆ ಅಲ್ಲೇ ಉಳಿದುಬಿಡುತ್ತವೆ. ಕಂದಾಯ ಇಲಾಖೆಯಲ್ಲಿ ಕಡತಗಳು ಮುಂದಕ್ಕೆ ಹೋಗುವುದೇ ಇಲ್ಲ ಎಂಬ ದೂರುಗಳೂ ಜನರಿಂದ ಕೇಳಿದ್ದೇನೆ. ಹಿಂದಿನ ಈ ಎಲ್ಲ ಪರಿಪಾಠಗಳಿಗೂ ಪೂರ್ಣ ವಿರಾಮ ಇಡುವ ಸಂಕಲ್ಪದೊಂದಿಗೆ ಕಂದಾಯ ಇಲಾಖೆಯು ಈಗ ಕೆಲಸ ನಿರ್ವಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ಕಂದಾಯ ಇಲಾಖೆಯಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ಭರವಸೆ ಇಟ್ಟು ಜವಾಬ್ದಾರಿ ನೀಡಿದರು. ಅಧಿಕಾರ ವಹಿಸಿದ ಎರಡು ತಿಂಗಳಿನಿಂದ ಇಡೀ ಇಲಾಖೆಗೆ ಚುರುಕು ಮುಟ್ಟಿಸಿ ಎಲ್ಲ ಕಡತಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದೂ ಅವರು ವಿವರಿಸಿದ್ದಾರೆ
1 Comment
срочно отремонтировать стиральную машину http://www.centr-remonta-stiralnyh-mashin.ru .