ಬೆಂಗಳೂರು, ನ.21- ಮೃತಪಟ್ಟಿರುವುದಾಗಿ ಎಲ್ಲರನ್ನೂ ನಂಬಿಸಿ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಯನ್ನು ಬಂಧಿಸುವಲ್ಲಿ ಸಿಸಿಬಿ ಯಶಸ್ವಿಯಾಗಿದ್ದಾರೆ.
ವೈಟ್ ಫೀಲ್ಡ್ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಎರಡು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು,ಪೊಲೀಸರಿಂದ ತಪ್ಪಿಸಿಕೊಳ್ಳಲು ಸತ್ತು ಹೋಗಿದ್ದೇನೆ ಎಂದು ನಂಬಿಸಿದ್ದ.
ಅಲ್ಲದೇ ಕುಟುಂಬಸ್ಥರು ಸಹ ಮಲ್ಲಿ ಸತ್ತಿದ್ದಾನೆ ಎಂದು ನಕಲಿ ದಾಖಲೆಗಳನ್ನು ಸಿದ್ದಪಡಸಿದ್ದರು. ಕಾಡುಬೀಸನಹಳ್ಳಿ ಚಾಲಕ ಸೋಮನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ,ಬಳಿಕ ರಾಜಾನುಕುಂಟೆಯಲ್ಲಿ ಇನ್ನೊಂದು ಕೊಲೆ ಕೃತ್ಯದಲ್ಲಿಯೂ ಆರೋಪಿಯಾಗಿದ್ದ. ಬಳಿಕ ಎರಡು ವರ್ಷಗಳಿಂದ ಈತ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಮನೆ ಬಳಿ ಪೊಲೀಸರು ವಿಚಾರಿಸಿದಾಗ ಅವನು ಸತ್ತು ಹೋಗಿದ್ದಾನೆ ಎಂದು ಕುಟುಂಬದವರು ಹೇಳಿದ್ದರು.
ಇನ್ನು ಸಿಸಿಬಿ ಪೊಲೀಸರು ಮಲ್ಲಿಯ ಗೆಳೆಯರು, ಪರಿಚಿತರನ್ನು ವಿಚಾರಿಸಿದರೂ ಸತ್ತಿದ್ದಾನೆ ಎಂದು ಮಾಹಿತಿ ದೊರೆತಿತ್ತು. ಮೃತಪಟ್ಟಿರುವುದಕ್ಕೆ ಬೇಕಾದ ದಾಖಲೆಗಳನ್ನು ಸಹ ಕುಟುಂಬ ರೆಡಿ ಮಾಡಿತ್ತು. ಅದರೂ ಸಹ ಅನುಮಾನ ಬಂದು ಸಿಸಿಬಿ ಪೊಲೀಸರು ತಲಾಶ್ ಮಾಡಿದ್ದರು. ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದರು. ಕೊನೆಗೆ ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಸಿಕ್ಕಿಬಿದ್ದಿದ್ದಾನೆ.