ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸಚಿವರು, ಮುಖಂಡರು ಆರೆಸ್ಸೆಸ್ ವಕ್ತಾರರಂತೆ ವರ್ತಿಸುತ್ತಿರುವುದು ಆರೆಸ್ಸೆಸ್ ನಾಯಕರಿಗೇ ಇರಿಸುಮುರಿಸು ಉಂಟು ಮಾಡಿದೆಯೇ?
ಹೌದು ಎನ್ನುತ್ತಿವೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಗಳು.
ಇದೇ ಕಾರಣಕ್ಕಾಗಿ ಮಂಗಳವಾರ ಬೆಳಗ್ಗೆ ಕೆಲ ಬಿಜೆಪಿ ನಾಯಕರಿಗೆ ಚುರುಕು ಮುಟ್ಟಿಸುವ ಕೆಲಸವನ್ನೂ ಆರೆಸ್ಸೆಸ್ ನಾಯಕರು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆರೆಸ್ಸೆಸ್‌ನ ವಕ್ತಾರರಂತೆ ವರ್ತಿಸಬೇಡಿ ಎಂದು ಬಿಜೆಪಿ ನಾಯಕರಿಗೆ ಖಡಕ್ ಸಂದೇಶವನ್ನೂ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ನಾಯಕರನ್ನು ಸಮರ್ಥಿಸಿ ಮಾತನಾಡುತ್ತಿದ್ದ ಕೆಲ ಆರೆಸ್ಸೆಸ್ ನಾಯಕರಿಗೂ ಈ ನಿಟ್ಟಿನಲ್ಲಿ ಸೂಚನೆ ನೀಡಿದ್ದು, ತಕ್ಷಣ ಈ ವರ್ತನೆ ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಈ ಮಧ್ಯೆ, ಹಿಂದುಗಳಿಗೆ ಧಾರ್ಮಿಕ ಹಾಗು ಸಾಂಸ್ಕೃತಿಕ ನಾಯಕತ್ವ ನೀಡಿರುವ
ಆರೆಸ್ಸೆಸ್ ಬಗ್ಗೆ ವಿಪರೀತವಾಗಿ ಟೀಕಿಸುತ್ತಿರುವ ಕೈ ನಾಯಕರ ನಡೆಯಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೇ ಮುಳುವಾಗಲಿದೆ ಎನ್ನಲಾಗುತ್ತಿದೆ.
ಆರೆಸ್ಸೆಸ್ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ವಾಚಾಮಗೋಚರವಾಗಿ ಟೀಕೆ ಮಾಡುತ್ತಿರುವುದು ಸಾಮಾನ್ಯ ಜನರಿಗೂ ಇಷ್ಟವಾಗುತ್ತಿಲ್ಲ. ಇದೇ ರೀತಿಯ ಟೀಕೆಯನ್ನು ಕಾಂಗ್ರೆಸ್ ನಾಯಕರು ಮುಂದುವರಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ನಷ್ಟವಾಗಲಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿದೆ.
ಕಾಂಗ್ರೆಸ್ ಟೀಕೆಗಳ ಬಗ್ಗೆ ಜನರೇ ನಿರ್ಧರಿಸಲಿ. ಹೀಗಾಗಿ ಇನ್ಮುಂದೆ ಕಾಂಗ್ರೆಸ್ ನಾಯಕರ ಟೀಕಾತ್ಮಕ ಮಾತುಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರಲೂ ಆರೆಸ್ಸೆಸ್ ನಿರ್ಧರಿಸಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಆರೆಸ್ಸೆಸ್ ಹಿರಿಯರೊಬ್ಬರು ತಿಳಿಸಿದ್ದಾರೆ.
ಹಾಗೆಯೇ ಬಿಜೆಪಿಯಿಂದಲೂ ಒಂದು ಹಂತದ ಅಂತರ ಕಾಯ್ದುಕೊಂಡು ತನ್ನ ಗೌರವ ಉಳಿಸಿಕೊಳ್ಳಲು ಆರೆಸ್ಸೆಸ್ ಮುಂದಾಗಿದೆ ಎಂದು ತಿಳಿದುಬಂದಿದೆ.
RSS ಪರ ಬ್ಯಾಟಿಂಗ್ ಮಾಡದಂತೆ ರಾಜ್ಯ ಬಿಜೆಪಿಗೆ ಸಂಘ ಸೂಚನೆ?
Previous Article27 ದೇಶಗಳಿಗೆ ಹರಡಿದ ಮಂಕಿ ಪಾಕ್ಸ್: ಹೆಚ್ಚಿದ ಆತಂಕ
Next Article ಹಳೆಯ ಟ್ವೀಟ್ ವೈರಲ್: ಭಾವುಕರಾದ ಅಪ್ಪು ಅಭಿಮಾನಿಗಳು