2022 ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ದೇಶವನ್ನು ಆಕ್ರಮಿಸಿದಾಗ, ವಿಜಯದ ಮಾಲೆ ಧರಿಸಲು ಇನ್ನೇನು ಕೆಲವು ದಿನಗಳು ಅಷ್ಟೇ ಎಂದು ಭಾವಿಸಿತ್ತು. ಆದರೆ, ದಿನಗಳು ಕಳೆದಂತೆ, ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವಿನ ಯುದ್ಧ ತೀವ್ರಗೊಂಡಿತು. ರಷ್ಯಾ ದೇಶದ ಈ ಆಕ್ರಮಣಕ್ಕೆ ವಿಶ್ವದ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದವು. ಮತ್ತೂ ಕೆಲವು ದೇಶಗಳು ಉಕ್ರೇನ್ ದೇಶದ ಬೆಂಬಲಕ್ಕೆ ನಿಂತವು. ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಂಡ ಈ ಯುದ್ಧದಿಂದ ಎರಡೂ ದೇಶಗಳಲ್ಲಿ ಅಪಾರ ನಷ್ಟಗಳಾಗಿವೆ. ಎರಡೂ ದೇಶಗಳು ಆರ್ಥಿಕವಾಗಿ ಬಹಳಷ್ಟು ಬಳಲಿವೆ. ಆದಾಗ್ಯೂ, ಯುದ್ಧ ಆರಂಭವಾಗಿ ಒಂದು ವರ್ಷವಾಗುತ್ತಾ ಬಂದರೂ, ಎರಡೂ ದೇಶಗಳ ನಡುವೆ ಯುದ್ಧ ಇನ್ನೂ ನಡೆಯುತ್ತಲೇ ಇದೆ.
ಯುದ್ಧದ ಆರಂಭದಲ್ಲಿ, ರಷ್ಯಾದಂತಹ ದೊಡ್ಡ ದೇಶದ ದಾಳಿಯನ್ನು ಸಣ್ಣ ದೇಶವಾದ ಉಕ್ರೇನ್ ಧೈರ್ಯದಿಂದಲೇ ಎದುರಿಸಿತ್ತು. ಚಿಕ್ಕ ರಾಷ್ಟ್ರವಾದ ಉಕ್ರೇನ್, ಶಕ್ತಿ ಪ್ರಯೋಗದೊಂದಿಗೆ ಯುಕ್ತಿಯನ್ನೂ ಪ್ರಯೋಗಿಸಿತ್ತು. ಆಕ್ರಮಣವನ್ನು ತಡೆಯುವ ಯೋಜನೆಯೊಂದಿಗೆ ಮಾಸ್ಕೋ (Moscow) ದ ಹೋರಾಟದ ಸಾಮರ್ಥ್ಯವನ್ನು ಕುಂದಿಸುವ ಯೋಜನೆಯನ್ನು ರೂಪಿಸಿತ್ತು. EU (Europian Union) ಸೇರಿದಂತೆ ಇನ್ನೂ ಹಲವು ಇತರ ದೇಶಗಳು ರಷ್ಯಾದ ಆರ್ಥಿಕತೆಯನ್ನು ಧ್ವಂಸಗೊಳಿಸುವ ಉದ್ದೇಶದಿಂದ ಕಠಿಣ ನಿರ್ಬಂಧಗಳನ್ನು ಅನ್ವಯಿಸಲು ಪ್ರಾರಂಭಿಸಿದವು. US ರಾಷ್ಟ್ರವು ರಷ್ಯಾದ ಕ್ರೆಮ್ಲಿನ್ (Kremlin) ಎಂಬ ನಗರಕ್ಕೆ ಸಂಬಂಧಿಸಿದ ನೂರಾರು ಕಂಪನಿಗಳನ್ನು, ಸಂಸ್ಥೆಗಳನ್ನು, ಬ್ಯಾಂಕ್ಗಳನ್ನು ಬ್ಲ್ಯಾಕ್ ಲಿಸ್ಟ್ ಮಾಡಿತು. ರಷ್ಯಾದ ಆಕ್ರಮಣವನ್ನು ನಿಯಂತ್ರಿಸಲು ಇಷ್ಟೆಲ್ಲ ತಂತ್ರಗಳನ್ನು ಪ್ರಯೋಗಿಸಿದರೂ, ಇವುಗಳು ನಿಜವಾಗಿಯೂ ರಷ್ಯಾದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವಲ್ಲಿ ಯಶಸ್ವಿಯಾಗಲಿಲ್ಲ.
ರಷ್ಯಾದ ಪ್ರಖ್ಯಾತ ಪತ್ರಕರ್ತೆಯೊಬ್ಬರ ಪ್ರಕಾರ, ಯುದ್ಧದ ಪರಿಣಾಮವಾಗಿ ಜನರ ಜೀವನದಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸ ಕಂಡು ಬಂದಿದೆ ಅಷ್ಟೆ. ಹಣದುಬ್ಬರದಿಂದ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಅಲ್ಲದೆ ಕೆಲವು ನಿರ್ದಿಷ್ಟ ಬ್ರ್ಯಾನ್ಡ್ ನ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ. ಉದಾಹರಣೆಗೆ, Coco-cola, Starbucks, McDonald’s ಇತ್ಯಾದಿ. ಮರೆಯಾದ ಪಾಶ್ಚಾತ್ಯ ಬ್ರ್ಯಾನ್ಡ್ ಗಳ ವಸ್ತುಗಳ ಸ್ಥಾನವನ್ನು ಸ್ಥಳೀಯ ಪರ್ಯಾಯಗಳು ತುಂಬಿವೆ. ಇವುಗಳನ್ನು ಜನರು ಸ್ವೀಕರಿಸಿದ್ದಾರೆ ಕೂಡ. ಹಾಗಾಗಿ, ಸಣ್ಣ ಪುಟ್ಟ ಕೊರತೆಗಳನ್ನು ಹೊರತು ಪಡಿಸಿ, ದೊಡ್ಡ ಮಟ್ಟದ ವ್ಯತ್ಯಾಸಗಳೇನೂ ಇಲ್ಲ.
2000 ರ ಇಸವಿಯಲ್ಲಿ ನಡೆದ ಆರ್ಥಿಕ ಬೆಳವಣಿಗೆ ರಷ್ಯಾದ ಪಾಲಿಗೆ ಮಹತ್ವದ ತಿರುವಾಗಿತ್ತು. ತೈಲ ಮತ್ತು ಅನಿಲ ಘಟಕಗಳಿಂದ ಉತ್ಪತ್ತಿಯಾದ 600 ಬಿಲಿಯನ್ ಡಾಲರ್ ಗಳ ಮೊತ್ತವನ್ನು ಪುಟಿನ್, ಉಕ್ರೇನ್ ಯುದ್ಧ ಧನವಾಗಿ ಉಪಯೋಗಿಸಿದರು. ರಷ್ಯಾದ ಆದಾಯವನ್ನು ಕುಂದಿಸಲು ಪಾಶ್ಚಾತ್ಯ ದೇಶಗಳು ಗುರಿಯಾಗಿಸಿಕೊಂಡಿದ್ದು ರಷ್ಯಾದ ಆದಾಯದ ಮೂಲವಾಗಿರುವ ತೈಲ ಮತ್ತು ಅನಿಲ ಘಟಕಗಳನ್ನು. US ಬಹುಬೇಗನೆ ಅವುಗಳ ಆಮದಿನ ಮೇಲೆ ನಿರ್ಬಂಧ ಹೇರಿತು. ಆದರೆ ತನ್ನ ಬಹುಪಾಲಿನ ಅನಿಲ ಪೂರೈಕೆಯಲ್ಲಿ ರಷ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿರುವ EU, ನಿರ್ಬಂಧಗಳನ್ನು ಹೇರಲು ಸ್ವಲ್ಪ ಸಮಯ ತೆಗೆದುಕೊಂಡಿತು. ಜೊತೆಗೆ, G7 ಗ್ರೂಪ್ ನ ದೇಶಗಳು, Australia ಮತ್ತು EU ದೇಶಗಳು ಒಟ್ಟಾಗಿ, ‘ಯಾವ ದೇಶವೂ ರಷ್ಯಾದ ತೈಲವನ್ನು ಒಂದು ಬ್ಯಾರೆಲ್ ಗೆ 60 ಡಾಲರ್ ಗಳಿಗಿಂತ ಹೆಚ್ಚು ಕೊಟ್ಟು ಕೊಂಡುಕೊಳ್ಳುವಂತಿಲ್ಲ’ ಎಂಬ ನಿಯಮವನ್ನು ಮಾಡಿದವು. ಹೀಗೆ ಎದುರಾದ ಬೆಲೆ ಕುಸಿತ ಮತ್ತು ಇತರ ರಾಷ್ಟ್ರಗಳ ನಿರ್ಬಂಧನೆಗಳು ಸ್ವಲ್ಪ ಮಟ್ಟಿಗೆ ರಷ್ಯಾದ ಆರ್ಥಿಕತೆಯ ಹಿನ್ನಡೆಗೆ ಕಾರಣವಾದವು.
ಒಂದು ಕಡೆ ಪಾಶ್ಚಾತ್ಯ ದೇಶಗಳು ರಷ್ಯಾದ ಆರ್ಥಿಕ ಸ್ಥಿತಿಯನ್ನು ಕುಂದಿಸುವ ಹುನ್ನಾರ ನಡೆಸುತ್ತಿದ್ದರೆ, ಇತ್ತ ಮಾಸ್ಕೊ ಮತ್ತಷ್ಟು ಹೆಚ್ಚಿನ ಮೊತ್ತವನ್ನು ಸೈನ್ಯಕ್ಕೆ ಮತ್ತು ಯುದ್ಧದ ಶಸ್ತ್ರಾಸ್ತ್ರಗಳಿಗೆ ವ್ಯಯಿಸಲು ಯೋಜನೆ ಹಾಕುತ್ತಿದೆ. ಮುಂದಿನ ಬಜೆಟ್ ನಲ್ಲಿ 150 ಬಿಲಿಯನ್ ಡಾಲರ್ ಗೂ ಹೆಚ್ಚಿನ ಮೊತ್ತವನ್ನು ಸೈನ್ಯ ಮತ್ತು ಭದ್ರತಾ ಪಡೆಗೆ ತೆಗೆದಿರಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ. ಈ ಮೂಲಕ ಆರ್ಥಿಕ ನಿರ್ಬಂಧನೆಗಳನ್ನು ಹೇರುವುದರಿಂದ ರಷ್ಯಾದ ಆರ್ಥಿಕ ವ್ಯವಸ್ಥೆಯನ್ನು ಅಲುಗಾಡಿಸಬಹುದು ಎಂದು ಭಾವಿಸಿದ್ದರೆ, ಅದು ಸಾಧ್ಯವಿಲ್ಲ ಎಂದು ತಿಳಿಸಿದೆ. ಕಾರಣ, ರಷ್ಯಾ ದೇಶಕ್ಕೆ ಇನ್ನೂ ಹಲವು ಆದಾಯದ ಮೂಲಗಳಿವೆ. ಹಾಗಾಗಿ, ಆರ್ಥಿಕ ನಿರ್ಬಂಧನೆಗಳಿಂದ ರಷ್ಯಾದ ಕೈಗಳನ್ನು ಕಟ್ಟಿಹಾಕಿ ಯುದ್ಧವನ್ನು ನಿಲ್ಲಿಸುವುದು ಕಷ್ಟ. ‘ಒಂದು ಮೂಲದಿಂದ ಆದಾಯ ಬರದಿದ್ದರೆ ಏನಂತೆ, ಮತ್ತೊಂದು ಬಗೆಯಲ್ಲಿ ಆಯೋಜಿಸುವೆ’ ಎನ್ನುವ ಧೋರಣೆ ತೋರಿದ ಪುಟಿನ್ ಸರ್ಕಾರ ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಭೂತ ಸೌಕರ್ಯಗಳು, ಪಿಂಚಣಿ, ಇವೆಲ್ಲವುಗಳನ್ನೂ ಬಡ್ಜೆಟ್ ಇಂದ ಕಡಿತ ಗೊಳಿಸುವ ಮೂಲಕ ಯುದ್ಧ ಧನವನ್ನು ಆಯೋಜಿಸಿತ್ತು.
ಆರ್ಥಿಕ ನಿರ್ಬಂಧನೆಗಳಲ್ಲದಿದ್ದರೆ, ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದು ಯಾವುದು?
ಹೊರ ರಾಷ್ಟ್ರಗಳ ಆರ್ಥಿಕ ನಿರ್ಬಂಧನೆಗಳು ನಿರೀಕ್ಷಿತ ಮಟ್ಟದಲ್ಲಿ ರಷ್ಯಾದ ಮೇಲೆ ಪ್ರಭಾವ ಬೀರಲಿಲ್ಲ. ಆದರೆ, ರಷ್ಯಾದ ಜನರ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದು ಸೆಪ್ಟೆಂಬರ್ 21, 2022 ರಂದು ರಷ್ಯಾ ಸರ್ಕಾರ ಘೋಷಿಸಿದ “MOBILIZATION” ಎಂಬ ನಿಲುವು. ಯುದ್ಧದಲ್ಲಿ ಹೋರಾಡಲು ಸಮರ್ಥರಾಗಿರುವ ಜನಸಾಮಾನ್ಯರನ್ನು ಯುದ್ಧ ಕಣಕ್ಕೆ ಇಳಿಯುವಂತೆ ಒತ್ತಾಯಿಸುವುದು ಈ ನಿರ್ಧಾರದ ಉದ್ದೇಶವಾಗಿತ್ತು. ಫೆಬ್ರುವರಿ 24, 2022 ರಂದು ರಷ್ಯಾ ಉಕ್ರೇನ್ ದೇಶದ ಮೇಲೆ ದಾಳಿ ಮಾಡಿತ್ತಾದರೂ, ಅದು ನಿರ್ದಿಷ್ಟ ಗಡಿಯಲ್ಲಿ, ಸೇನೆ ಮತ್ತು ಸೈನಿಕರ ಹಂತದಲ್ಲಿ ನಡೆಯುತ್ತಿದ್ದ ಯುದ್ಧವಾಗಿತ್ತು. ಆದರೆ MOBILIZATION ನಿರ್ಧಾರ ಕೈಗೊಂಡಾಗಿನಿಂದ ಯುದ್ಧದ ಭೀತಿ ಮನೆ ಮನೆಯ ಕದವನ್ನೂ ತಟ್ಟಿತ್ತು. ಹೋರಾಟದ ವಯಸ್ಸಿನ ರಷ್ಯಾದ ಪುರುಷರನ್ನು ಯುದ್ಧ ಕಣಕ್ಕಿಳಿಯಲು ವ್ಯಾಪಕವಾಗಿ ಒತ್ತಾಯಿಸಲಾಗುತ್ತಿತ್ತು. MOBILIZATION ನ ಭೀತಿಯಿಂದ ಸಾವಿರಾರು ಜನರು ರಾತ್ರೋ ರಾತ್ರಿ ದೇಶ ಬಿಟ್ಟು ಹೊರಡಲು ಸಿದ್ಧರಾದರು. ರಷ್ಯಾದ ಗಡಿಯನ್ನು ಹಂಚಿಕೊಂಡ ಕಝಾಕಿಸ್ತಾನ್ ಮತ್ತು ಜಾರ್ಜಿಯಾ (Kazakhstan and Georgia) ದೇಶಗಳಿಗೆ ವಲಸೆ ಹೊರಡಲು ಸಾಲುಗಟ್ಟಿ ನಿಂತರು. ಕೆಲವರದ್ದು ದೇಶದ ಸ್ಥಿತಿಗತಿಗಳು ಸರಿಯಾದ ಮೇಲೆ ಮರಳುವ ಯೋಜನೆಯಾಗಿತ್ತು. ದೇಶ ಬಿಟ್ಟು ಹೊರಟ ಬಹುತೇಕರು ಯುವಕರು ಮತ್ತು ವಯಸ್ಕ ಪುರುಷರಾಗಿದ್ದರು. ಏಕಾಏಕಿ ಆದ ಈ ವಲಸೆ ದೇಶದ ಜನಸಂಖ್ಯೆಯ ಮೇಲೆ ಪರಿಣಾಮವನ್ನು ಬೀರಿತು. ಸಾಮಾನ್ಯ ಜನರನ್ನೂ ಯುದ್ಧ ಕಣಕ್ಕಿಳಿಸಬೇಕಾದ ಪರಿಸ್ಥಿತಿಯಲ್ಲಿ, ವಲಸೆಯಿಂದ ಜನಸಂಖ್ಯೆಯಲ್ಲಿ ಆದ ಈ ಕುಸಿತ ಯುದ್ಧದ ಮೇಲೆ ಪರಿಣಾಮವನ್ನು ಬೀರಿರಲೂಬಹುದು.
ಈಗೇನೋ ಆಯ್ತು, ಮುಂದೆ ಹೇಗೆ ?
ಒಂದು ವೇಳೆ, ಹೊರ ರಾಷ್ಟ್ರಗಳು ರಷ್ಯಾದ ಮೇಲಿನ ಆರ್ಥಿಕ ನಿರ್ಬಂಧವನ್ನು ಮುಂದಿನ ಕೆಲವು ವರ್ಷಗಳವರೆಗೆ ಮುಂದುವರೆಸಿದರೆ, ಯುದ್ಧದ ದೀರ್ಘಾವಧಿಯ ವೆಚ್ಚಗಳು ರಷ್ಯಾದ ಮೇಲೆ ಹೇಗೆ ಪರಿಣಮಿಸಬಹುದು ಎಂದು ನೋಡುವುದಾದರೆ – ಮೊದಲ ಕೆಲವು ವರ್ಷಗಳವರೆಗೆ ಹೆಚ್ಚೇನೂ ವ್ಯತ್ಯಾಸವೆನಿಸದಿದ್ದರೂ ಭವಿಷ್ಯದಲ್ಲಿ, ಜಾಗತಿಕವಾಗಿ ಪ್ರತಿಸ್ಪರ್ಧಿಸಲು ರಷ್ಯಾ ಕಷ್ಟ ಪಡಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಇತ್ತೀಚೆಗಿನ ಬೆಳವಣಿಗೆಗಳಲ್ಲಿ, Germany ಮತ್ತು US ದೇಶಗಳು ತಮ್ಮ ಯುದ್ಧ ಟ್ಯಾಂಕರ್ ಗಳನ್ನು ಒದಗಿಸುವ ಮೂಲಕ ಉಕ್ರೇನ್ ದೇಶಕ್ಕೆ ಸಹಾಯ ಮಾಡುವುದಾಗಿ ತಿಳಿಸಿವೆ. ಯುದ್ಧದ ಈ ಹಂತದಲ್ಲಿ ದೊರೆತ ಈ ಸಹಾಯ, ರಷ್ಯಾದ ಹಿಡಿತದಲ್ಲಿರುವ ತನ್ನ ಪ್ರಾಂತ್ಯಗಳನ್ನು ಮರಳಿ ಪಡೆಯಲು ಉಕ್ರೇನ್ ಸೇನೆಗೆ ಸಹಾಯವಾಗಬಲ್ಲದು.
ಒಂದು ಕಡೆ, ಸರ್ವಾಧಿಕಾರತ್ವ ಇರುವವರೆಗೂ ಸರ್ವಾಧಿಕಾರಿಗೆ ಯುದ್ಧ ಧನವನ್ನು ಹೊಂದಿಸಲು ಕಷ್ಟವಾಗದು ಎಂಬ ಧೋರಣೆಯೊಂದಿಗೆ ರಷ್ಯಾ ತಾನಿನ್ನೂ ಆಟ ಮುಗಿಸಿಲ್ಲ ಎನ್ನುತ್ತಿದೆ. ಮತ್ತೊಂದು ಕಡೆ ಬೆಂಬಲಿಗರಿಂದ ಸಹಾಯ ಪಡೆದುಕೊಳ್ಳುತ್ತಿರುವ ಉಕ್ರೇನ್ ತಾನೂ ಸಹ ಇನ್ನೂ ಯುದ್ಧದಲ್ಲಿ ಹೋರಾಡಲು ಸಶಕ್ತನಾಗಿದ್ದೇನೆ ಎಂಬ ಸಂದೇಶವನ್ನು ನೀಡಿದೆ.