ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ನಗರದ ಮೂಲಭೂತ ಸಮಸ್ಯೆ ಆಗಿರುವ ಟ್ರಾಫಿಕ್ ಜಾಮ್ ಸಮಸ್ಯೆ ಇದೀಗ ಕೊಂಚ ನಿವಾರಣೆಯಾದಂತೆ ಅನಿಸಿದೆ. ಅತಿಯಾದ ಸಂಚಾರ ದಟ್ಟಣೆ ಪ್ರದೇಶವಾಗಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಮಾರತ್ ಹಳ್ಳಿ ರಸ್ತೆಗಳಲ್ಲಿ ದಟ್ಟಣೆ ಸಮಸ್ಯೆ ಕೆಲ ದಿನಗಳಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.
ಇದಕ್ಕೆ ಕಾರಣ ಎನು ಗೊತ್ತಾ…ಈ ಸ್ಟೋರಿ ನೋಡಿ ಗೊತ್ತಾಗುತ್ತದೆ
ಬೆಂಗಳೂರು ನಗರದ ಸಂಚಾರ ದಟ್ಟಣೆಯ ಸಮಸ್ಯೆ
ನಿವಾರಿಸಲು ನಗರ ಸಂಚಾರ ವಿಭಾಗಕ್ಕೆ ಎಡಿಜಿಪಿ ದರ್ಜೆಯ ವಿಶೇಷ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಿ, ಐಪಿಎಸ್ ಅಧಿಕಾರಿ ಡಾ. ಎಂ.ಎ.ಸಲೀಂ ಅವರನ್ನು ನೇಮಿಸಲಾಗಿದೆ.
ಸಲೀಂ ಅವರು ಹೊಸ ಹುದ್ದೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಬೆಂಗಳೂರು ಸಂಚಾರ ವ್ಯವಸ್ಥೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ.
ಕಡಿಮೆ ಆಗೋದೆ ಇಲ್ಲ ಎಂದುಕೊಂಡಿದ್ದ ಟ್ರಾಫಿಕ್ ಜಾಮ್ ಸಮಸ್ಯೆ ಈಗ ರಾಜ್ಯ ರಾಜಧಾನಿಯಲ್ಲಿ ಕಡಿಮೆಯಾಗಿದೆ. ಈ ಮೊದಲು ಇದರ ತೀವ್ರತೆ ಯಾವ ಪ್ರಮಾಣದಲ್ಲಿ ಇತ್ತೆಂದರೆ ಬೆಂಗಳೂರಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಕೂಡ ಸಂಚಾರ ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದರು.
ಪ್ರಧಾನಿ ಸೂಚನೆ ನಂತರ ತಲೆ ಕೆಡಿಸಿಕೊಂಡ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿ ಈ ಹಿಂದೆ ಬೆಂಗಳೂರು ನಗರ ಸಂಚಾರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಸಲೀಂ ಕೆಲ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರು ಅವರಿಗೆ ಈ ಜವಾಬ್ದಾರಿ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂತು.ಆದರೆ ಅವರೀಗ ಉನ್ನತ ದರ್ಜೆಯ ಅಧಿಕಾರಿಯಾಗಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಅದಕ್ಕೆ ಅನುಗುಣವಾದ ಹುದ್ದೆ ಸೃಷ್ಟಿಸಿ ಅದನ್ನು ವಿಶೇಷ ಆಯುಕ್ತರ ಹುದ್ದೆ ಸಂಚಾರ ವಿಭಾಗ ಎಂದು ಕರೆಯಲಾಯಿತು.
ಈ ರೀತಿಯಲ್ಲಿ ಹೊಸದಾಗಿ ಸೃಷ್ಟಿಸಲಾದ ವಿಶೇಷ ಆಯುಕ್ತರ ಹುದ್ದೆಗೆ ಸಲೀಂ ನೇಮಕ ಬಳಿಕ, ಕೊಂಚ ಮಟ್ಟಿಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಕ್ಕಿದಂತಾಗಿದೆ.
ಅಂದಹಾಗೆ ಡಾ. ಎಂ.ಎ ಸಲೀಂ ಜಾರಿಗೆ ತಂದ ಮೂರು ಸೂತ್ರದಿಂದ ನಗರದಲ್ಲಿ ಟ್ರಾಫಿಕ್ ಕಡಿಮೆಯಾಗಿದೆ. ಈ, ಮೂರು ಸೂತ್ರಗಳು ಯಾವುವೆಂದರೆ, ಮೊದಲನೆಯದು ಸರಕು ವಾಹನಗಳು ನಿರ್ಬಂಧ.
ಬೆಳಗ್ಗೆ ಎಂಟರಿಂದ ಹನ್ನೊಂದು ಹಾಗೂ ಸಂಜೆ ಐದರಿಂದ ಎಂಟರವರೆಗೆ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸರಕು ಸಾಗಣೆಯ ಭಾರಿ ವಾಹನಗಳ ನಗರ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಎರಡನೆಯದು ಸಿಗ್ನಲ್ ಸಿಂಕ್ರನೈಜ್. ಒಂದು ಸಿಗ್ನಲ್ ವಾಹನ ಸಂಚಾರಕ್ಕೆ ತೆರೆದುಕೊಂಡರೆ ಇಲ್ಲಿಂದ ಹಾದು ಹೋಗುವ ವಾಹನ ಮುಂದಿನ ಸಿಗ್ನಲ್ ತಲುಪುವಾಗ ಆ ಸಿಗ್ನಲ್ ಕೂಡ ಓಪನ್ ಆಗಲಿದೆ.ಇಂತಹ ತಾಂತ್ರಿಕ ಸುಧಾರಣೆ ತಂದ ಪರಿಣಾಮ ಸಿಗ್ನಲ್ ಗಳಲ್ಲಿ ಹಸಿರು ದೀಪಕ್ಕೆ ಕಾಯುವ ವಾಹನಗಳ ಪ್ರಮಾಣ ಕಡಿಮೆಯಾಗಿದೆ ಮೂರನೆಯದು ಬೆಳಗ್ಗೆಯೇ ರಸ್ತೆಗೆ ಇಳಿಯುವ ಸಂಚಾರಿ ಪೊಲೀಸರು. ಸಂಚಾರಿ ಪೊಲೀಸ್ ಅಧಿಕಾರಿಗಳು ಮರಗಳ ಮರೆಯಲ್ಲಿ, ಗೋಡೆ,ಕಂಬಗಳ ಪಕ್ಕದಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘನೆ ದಂಡ ವಿಧಿಸುವುದನ್ನು ಬಿಟ್ಟು
ಬೆಳಗ್ಗೆ ಎಂಟಕ್ಕೆ ಮೊದಲೇ ರಸ್ತೆಗೆ ಇಳಿದು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ನಗರದಲ್ಲಿ ಟ್ರಾಫಿಕ್ ಸದ್ಯ ಕಡಿಮೆಯಾಗುತ್ತಿದೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಡಾ.ಎಂ.ಎ ಸಲೀಂ, ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯದ್ದೇ ಹೆಚ್ಚು ಸಮಸ್ಯೆ.ಹಲವು ರಸ್ತೆಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಗಳಿಂದಲೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಇದನ್ನು ಸುಧಾರಿಸುವುದಕ್ಕೆ ನಮ್ಮ ಸಂಚಾರಿ ಇಲಾಖೆ ಮುಂದಾಗಿದ್ದು, ಒಳ್ಳೆಯ ಸ್ಪಂದನೆ ಸಹ ದೊರೆಯುತ್ತಿದೆ ಎಂದರು.
ಸಂಚಾರ ದಟ್ಟಣೆ ತೀವ್ರವಾಗಿರುವ ಹೆಬ್ಬಾಳ ಫ್ಲೈಓವರ್ನಲ್ಲೂ ಸುಧಾರಣೆ ಕಾಣುತ್ತಿದೆ. ನಾಯಂಡಹಳ್ಳಿಯಿಂದ ಮೈಸೂರು ರಸ್ತೆಯಲ್ಲೂ ಸಹ ವಾಹನಗಳು ವೇಗವಾಗಿ ಸಾಗುತ್ತಿವೆ. ಮಾರತ್ ಹಳ್ಳಿ ರಿಂಗ್ ರೋಡ್, ವೈಟ್ ಫೀಲ್ಡ್ ಸೇರಿದಂತೆ ಕೆಲ ಭಾಗಗಳಲ್ಲಿ ಸಮಸ್ಯೆಗಳು ಇನ್ನೂ ಇವೆ. ಸಿಟಿ ಮಾರ್ಕೆಟ್ನಲ್ಲಿ ಪಾದಚಾರಿ ಸಮಸ್ಯೆ ಇತ್ತು, ಅದನ್ನ ಕಾರ್ಯರೂಪಕ್ಕೆ ಬರಲು ಹೆಚ್ಚುವರಿ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕೆ.ಆರ್ ಮಾರ್ಕೆಟ್ನಲ್ಲಿ ಸಂಚಾರ ದಟ್ಟಣೆ ಸುಧಾರಣೆ ಕಂಡಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
Previous Articleಚಿರತೆ ಭಯದಲ್ಲಿ ಕರ್ನಾಟಕ
Next Article ಬೈಕ್ ನಲ್ಲಿ ಓವರ್ ಟೇಕ್ ಮಾಡಿದ್ದಕ್ಕೆ ಹೀಗಾ ಮಾಡೋದು?