ವಿಜಯನಗರ ಜಿಲ್ಲೆಯ ಸಂಡೂರು ಕ್ಷೇತ್ರ ಅತ್ಯಂತ ವಿಶಿಷ್ಟವಾದ ಕ್ಷೇತ್ರವಾಗಿದೆ.ಉದ್ಯಮಿಗಳೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.ಇಲ್ಲಿ ಯಾರೇ ಅಭ್ಯರ್ಥಿಯಾದರೂ ಗಣಿ ಧಣಿಗಳ ನಡುವಿನ ಪಾರುಪತ್ಯಕ್ಕೆ ವೇದಿಕೆಯಾಗುತ್ತದೆ ಇದಕ್ಕೆ ತನ್ನದೇ ಆದ ಇತಿಹಾಸವಿದೆ
ಸಂಡೂರಿನ ರಾಜಮನೆತನ ಘೋರ್ಪಡೆ ಅವರ ಭದ್ರಕೋಟೆಯಾಗಿದ್ದ ಈ ಒಮ್ಮೆ ರಾಜವಂಶಸ್ಥ ಘೋರ್ಪಡೆ ಅವರು ಸ್ಪರ್ಧೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಮ್ಮ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮುಖಂಡ ಭೂಪತಿ ಅವರನ್ನು ಕಣಕ್ಕಿಳಿಸಿ ವಿಧಾನಸಭೆಗೆ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.
ಇಂತಹುದೇ ಪರಂಪರೆ ಇಲ್ಲಿ ಈಗಲೂ ಮುಂದುವರೆದಿದೆ. ಘೋರ್ಪಡೆ ಅವರ ನಂತರ ಈ ಕ್ಷೇತ್ರದ ಮೇಲೆ ಗಣಿ ಉದ್ಯಮಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಿಡಿತ ಹೊಂದಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ನಂತರ ಪರಿಶಿಷ್ಟ ವರ್ಗಕ್ಕೆ ಈ ಕ್ಷೇತ್ರ ಮೀಸಲಾದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಹೋದ ಅವರು ಇಲ್ಲಿಂದ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ತುಕರಾಮ್ ಅವರನ್ನು ಕಣಕ್ಕಿಳಿಸಿ ಆಯ್ಕೆಯಾಗುವಂತೆ ನೋಡಿಕೊಂಡರು ಈ ಮೂಲಕ ಕ್ಷೇತ್ರದ ಮೇಲೆ ತಮ್ಮ ಹಿಡಿತ ಅಲುಗಾಡದಂತೆ ನೋಡಿಕೊಂಡಿದ್ದಾರೆ
ಅದರಂತೆ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ತುಕಾರಾಮ್ ಇದೀಗ ಈ ಕ್ಷೇತ್ರದಿಂದ ತಮ್ಮ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ ಎಂದಿನಂತೆ ಸಂತೋಷ್ ಲಾಡ್ ದಂಪತಿಯ ಬೆನ್ನಿಗೆ ನಿಂತಿದ್ದಾರೆ ಮತ್ತೊಂದೆಡೆ ಬಿಜೆಪಿಯಿಂದ ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಕಣಕ್ಕಿಳಿದಿದ್ದು ಅವರಿಗೆ ಮತ್ತೊಬ್ಬ ಗಣಿ ಉದ್ಯಮಿ ಜನಾರ್ಧನ ರೆಡ್ಡಿ, ಬೆಂಗಾವಲಾಗಿದ್ದಾರೆ
ಗಣಿ ಅಕ್ರಮ ಪ್ರಕರಣಗಳಿಂದಾಗಿ 13 ವರ್ಷಗಳ ಬಳಿಕ ಬಳ್ಳಾರಿಯಲ್ಲೇ ವಾಸ್ತವ್ಯಕ್ಕೆ ಅವಕಾಶ ಪಡೆದಿರುವ ಜನಾರ್ದನರೆಡ್ಡಿ ಜಿಲ್ಲೆಗೆ ಭೇಟಿ ನೀಡಿದ ಮರು ದಿನವೇ ಸಂಡೂರಿಗೆ ತೆರಳಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಅಷ್ಟೇ ಅಲ್ಲ ಅಲ್ಲಿಯೇ ಮನೆ ಮಾಡಿ ವಾಸ್ತವ್ಯ ಕೂಡ ಹೂಡಿದ್ದಾರೆ.
ಹಲವು ಕಾರಣಗಳಿಂದ ಜನಾರ್ಧನರೆಡ್ಡಿ ಅವರೊಂದಿಗಿನ ಒಡನಾಟ ಕಡಿದುಕೊಂಡಿದ್ದ
ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ಹಿರಿಯ ನಾಯಕರ ಮನವೊಲಿಕೆಯಿಂದ ನಿಲುವು ಬದಲಾಯಿಸಿದ್ದಾರೆ.
ಈ ಇಬ್ಬರು ನಾಯಕರು ಒಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಪಣತೊಟ್ಟು ಅಖಾಡದಲ್ಲಿ ಸೆಡ್ಡು ಹೊಡೆದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಸಾಕಷ್ಟು ಪ್ರಯಾಸ ಪಡಬೇಕಾಗುತ್ತದೆ.
ಆದರೆ, ಟಿಕೆಟ್ ಆಕಾಂಕ್ಷಿಗಳಾಗಿದ್ದ ದಿವಾಕರ್, ಶಿಲ್ಪಾ ರಾಘವೇಂದ್ರ, ಮಾಜಿ ಸಂಸದ ದೇವೇಂದ್ರಪ್ಪ ಅವರು ನೀಡುವ ಒಳೇಟಿನ ಸಾಧ್ಯತೆ ಬಿಜೆಪಿ ಅಭ್ಯರ್ಥಿಯ ಚಿಂತೆಗೆ ಕಾರಣವಾಗಿದೆ.
ಕ್ಷೇತ್ರದಲ್ಲಿ 1957 ರಿಂದ 2023ರವರೆಗೆ 14 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿ ಕ್ಷೇತ್ರ ಕೈ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 2,36,100 ಮತದಾರರಿದ್ದಾರೆ. ಎಸ್ಟಿ 65 ಸಾವಿರ, ಎಸ್ಸಿ 40 ಸಾವಿರ, ಲಿಂಗಾಯತ 35 ಸಾವಿರ, ಕುರುಬರು 30 ಸಾವಿರ, ಮುಸ್ಲಿಂ 10 ಸಾವಿರ, ಹಾಗೂ ಬ್ರಾಹ್ಮಣ, ಶೆಟ್ಟಿ, ಕಮ್ಮ, ಬಲಿಜ ಜಾತಿ ಹಾಗೂ ಇತರ ಸಮುದಾಯದ 40 ಸಾವಿರಕ್ಕೂ ಮತದಾರರಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯ ಜೊತೆಗೆ ಸಚಿವರಾದ ಜಮೀರ್ ಅಹ್ಮದ್ ಖಾನ್ ಮಾಜಿ ಸಚಿವ ಬಿ ನಾಗೇಂದ್ರ ನಿಂತಿರುವುದು ಮೇಲ್ನೋಟಕ್ಕೆ ಕಾಂಗ್ರೆಸ್ ಪರವಾಗಿ ವಾತಾವರಣ ಇರುವಂತೆ ಕಂಡುಬರುತ್ತದೆ ಒಳ ಮೀಸಲಾತಿ,ವಾಲ್ಮೀಕಿ ನಿಗಮದ ಅಕ್ರಮ ಮತ್ತು ಜಿಂದಾಲ್ ಗೆ ಭೂಮಿ ಹಸ್ತಾಂತರ ವಿಷಯ Electionಯಲ್ಲಿ ಕೆಲಸ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿಗೆ ತೊಡಕಾಗಲಿದೆ.