ಬೆಳಗಾವಿ,ಜೂ.22-ಮೂರು ದಿನಗಳ ಹಿಂದೆ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ನಡೆದಿದ್ದ ಸತೀಶ್ ಪಾಟೀಲ್ ಕೊಲೆ ಪ್ರಕರಣದ ಸಂಬಂಧ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಗೌಂಡವಾಡ ಆನಂದ ಕುಟ್ರೆ (60), ಜಾಯಪ್ಪ ನೀಲಜಕರ (52), ಸುರೇಖಾ ನೀಲಜಕರ (47), ಸಂಜನಾ ನೀಲಜಕರ (21), ವೆಂಕಟೇಶ ಕುಟ್ರೆ (50), ದೌಲತ್ ಮುತಗೇಕರ (21), ಲಖನ್ ನೀಲಜಕರ (25), ಲಕ್ಷ್ಮಿ ಕುಟ್ರೆ (45), ಸಂಗೀತಾ ಕುಟ್ರೆ (45) ಹಾಗೂ ಶಶಿಕಲಾ ಕುಟ್ರೆ (50) ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಜೂ. 18ರ ರಾತ್ರಿ ಸತೀಶ್ ಪಾಟೀಲ್ ಹತ್ಯೆ ನಡೆದಿತ್ತು. ಕಾರು ನಿಲುಗಡೆ ವಿಚಾರಕ್ಕೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು. ಸತೀಶ್ ಹತ್ಯೆ ಬಳಿಕ ಗ್ರಾಮದಲ್ಲಿ ವಾಹನ, ಬಣವೆಗೆ ಉದ್ರಿಕ್ತರು ಬೆಂಕಿ ಇಟ್ಟಿದ್ದರು ಎಂದು ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
ಬಂಧಿತ 10 ಮಂದಿ ಆರೋಪಿಗಳು ಗ್ರಾಮದ ದೇವಸ್ಥಾನದ ಜಾಗವನ್ನು ಗ್ರಾಮದ ಕೆಲ ಪ್ರಭಾವಿಗಳು ಒತ್ತುವರಿ ಮಾಡಿದ್ದರು. ದೇವಸ್ಥಾನದ ಜಾಗ ಮರಳಿ ಸಿಗಬೇಕೆಂದು ಸತೀಶ್ ಪಾಟೀಲ್ ಹೋರಾಟ ಮಾಡ್ತಿದ್ದರು. ಇದೇ ವೈಷಮ್ಯಕ್ಕೆ ಸತೀಶ್ ಪಾಟೀಲ್ ಹತ್ಯೆ ಮಾಡಲಾಗಿದೆ.
ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಕೊಲೆ ಬಳಿಕ ನಡೆದ ಹಿಂಸಾಚಾರ ಸಂಬಂಧ ಕಾಕತಿ ಠಾಣೆ ಪೊಲೀಸರು 22 ಆರೋಪಿಗಳ ಬಂಧಿಸಿದ್ದಾರೆ. ಕೊಲೆ ಹಾಗೂ ಹಿಂಸಾಚಾರ ಎರಡೂ ಪ್ರಕರಣಗಳ ಸಂಬಂಧ ಬಂಧಿತರ ಸಂಖ್ಯೆ ಒಟ್ಟು 32ಕ್ಕೆ ಏರಿಕೆಯಾಗಿದೆ.