ಬೆಂಗಳೂರು – ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ಮಾಡುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಲೋಕಸಭಾ Electionಗೂ ಮುನ್ನ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವಂತೆ ಆಗ್ರಹಿಸುತ್ತಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi ) ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.
ತಮ್ಮ ಆಪ್ತ ವಲಯದ ಶಾಸಕರು ಮತ್ತು ಪ್ರಮುಖ ಹಿಂದುಳಿದ ದಲಿತ ಮುಖಂಡರೊಂದಿಗೆ ದೆಹಲಿಗೆ ತೆರಳಿದ್ದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ದೃಷ್ಟಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ ಮೂವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಬೇಕು ಈ ಮೂಲಕ ಒಕ್ಕಲಿಗ, ಹಿಂದುಳಿದ ಎಲ್ಲರಿಗೂ ಅಧಿಕಾರ ನೀಡಿದಂತಾಗಲಿದ್ದು,ಇದು ಪಕ್ಷಕ್ಕೆ ಅನುಕೂಲಕರ ಎಂಬ ವಾದ ಮಂಡಿಸಿದ್ದಾರೆ.
ಮೂವರು ಉಪ ಮುಖ್ಯಮಂತ್ರಿ ನೇಮಕ ವಿಚಾರ ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ.ಈ ಹಿಂದೆ ಈ ಬಗ್ಗೆ ಬಹಿರಂಗವಾಗಿಯೇ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಹಲವು ನಾಯಕರು ಹೇಳಿಕೆಯನ್ನು ನೀಡಿದ್ದರು.
ಇದು ಹಾಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸೆಡ್ಡು ಹೊಡೆಯುವ ತಂತ್ರ ಎಂದು ವ್ಯಾಖ್ಯಾನಿಸುವ ಮೂಲಕ ಈ ವಿಚಾರ ಕಾಂಗ್ರೆಸ್‌ನಲ್ಲಿ ಒಳ ಬೇಗುದಿ ಹುಟ್ಟು ಹಾಕಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್, ಈ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡದಂತೆ ತಾಕೀತು ಮಾಡಿತ್ತು.ಇದರೊಂದಿಗೆ ಮೂವರು ಉಪಮುಖ್ಯಮಂತ್ರಿಗಳ ನೇಮಕ ಹಿನ್ನಲೆಗೆ ಸರಿದಿತ್ತು.
ಇದೀಗ ಮತ್ತೆ ಈ ವಿಷಯ ಮುನ್ನಲೆಗೆ ಬಂದಿದೆ.
ಲೋಕಸಭಾ ಚುನಾವಣೆಗೂ ಮುನ್ನ ಶತಾಯ ಗತಾಯ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಲೇಬೇಕು ಎಂದು ಹೈಕಮಾಂಡ್ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಇವರುಗಳನ್ನು ಭೇಟಿ ಮಾಡಿ ಮೂವರು ಉಪಮುಖ್ಯಮಂತ್ರಿಗಳ ನೇಮಕಾತಿ ಮಾಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಗೆ ಮುನ್ನ ವಿವಿಧ ಸಮುದಾಯಗಳಿಗೆ ಸೇರಿದ ಮೂವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೆ ಚುನಾವಣೆಯಲ್ಲಿ ಆ ಸಮುದಾಯದ ಮತಗಳಿಸುವುದು ಸುಲಭವಾಗುತ್ತದೆ. ರಾಜಕೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬುದನ್ನು ಸತೀಶ್ ಜಾರಕಿಹೊಳಿ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ.
ಸರ್ಕಾರ ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಮ್ಮನ್ನು ಬಿಟ್ಟು ಯಾರನ್ನೂ ಉಪಮುಖ್ಯಮಂತ್ರಿ ಮಾಡಬಾರದು ಎಂಬ ಷರತ್ತು ಹಾಕಿ ಉಪ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು.
ಬೆಳಗಾವಿ ರಾಜಕಾರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪದಿಂದ ಸಿಡಿದೆದ್ದ ಸತೀಶ್ ಜಾರಕಿಹೊಳಿ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಲಗಾಮು ಹಾಕುವ ಉದ್ದೇಶದಿಂದಲೇ ಮೂವರು ಉಪಮುಖ್ಯಮಂತ್ರಿಗಳ ನೇಮಕದ ವಿಚಾರ ಪ್ರಸ್ತಾಪವಾಗಲು ಕಾರಣರಾಗಿದ್ದರು.
ಈ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯವಾಗಿ ಸೆಡ್ಡು ಹೊಡೆಯುವ ಲೆಕ್ಕಾಚಾರ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರದ್ದಾಗಿತ್ತು.
ಈಗ ಚೆಂಡು ಹೈಕಮಾಂಡ್ ಅಂಗಳ ತಲುಪಿದೆ.
ಉಪಮುಖ್ಯಮಂತ್ರಿಗಳ ನೇಮಕ ವಿಚಾರದಲ್ಲಿ ಜಾರಕಿಹೊಳಿ ಅವರ ಮಾತಿಗೆ ಅಸ್ತು ಎನ್ನುತ್ತದೆಯೇ ಇಲ್ಲ ಎನ್ನುತ್ತದೆಯೋ ಎಂಬುದು ಕುತೂಹಲ ಮೂಡಿಸಿದೆ.