ಬೆಂಗಳೂರು,ಜ.30-
ಒಗ್ಗಟ್ಟಿನ ಮಂತ್ರಪಠಣದೊಂದಿಗೆ ಮುಂಬರುವ ವಿಧಾನಸಭೆ Electionಗೆ ಮತಬೇಟೆಗಾಗಿ ಜಂಟಿ ‘ಪ್ರಜಾಧ್ವನಿ’ ಬಸ್ ಯಾತ್ರೆ ಮುಗಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೀಗ ಪ್ರತ್ಯೇಕ ಬಸ್ ಯಾತ್ರೆ ಆರಂಭಿಸಲಿದ್ದಾರೆ. ಈ ಸಂಬಂಧ ಎರಡನೇ ಹಂತದ ಪ್ರಜಾಧ್ವನಿ ಬಸ್ ಯಾತ್ರೆಯ ವೇಳಾಪಟ್ಟಿ ಸಿದ್ಧವಾಗಿದೆ. ಈ ಇಬ್ಬರೂ ಪ್ರತ್ಯೇಕವಾಗಿ ಉತ್ತರ– ದಕ್ಷಿಣ ಭಾಗದಿಂದ ಪಕ್ಷದ ಪ್ರಮುಖ ನಾಯಕರನ್ನು ಜೊತೆಗೆ ಕರೆದುಕೊಂಡು, ಫೆಬ್ರುವರಿ 3ರಿಂದ ಕ್ಷೇತ್ರವಾರು ಮತಬೇಟಗೆ ಹೊರಡಲಿದ್ದಾರೆ.
ಪಕ್ಷದ 35 ನಾಯಕರು ಮತ್ತು ಆಪ್ತ ಬಳಗದ ಜೊತೆ ಬೀದರ್‌ನ ಬಸವಕಲ್ಯಾಣದಿಂದ ಸಿದ್ದರಾಮಯ್ಯ ಯಾತ್ರೆ ಆರಂಭಿಸಲಿದ್ದಾರೆ. ಇವರೊಂದಿಗೆ ಎಂ.ಬಿ. ಪಾಟೀಲ, ಜಮೀರ್ ಅಹಮ್ಮದ್, ಬೈರತಿ ಸುರೇಶ್, ಎಚ್.ಸಿ. ಮಹಾದೇವಪ್ಪ, ಸಂತೋಷ್ ಲಾಡ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಉಮಾಶ್ರೀ, ಅಂಜಲಿ ನಿಂಬಾಳ್ಕರ್ ಮುಂತಾದವರು ತೆರಳಲಿದ್ದಾರೆ. ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿ ಯಾತ್ರೆ ಆರಂಭಿಸಲಿರುವ ಸಿದ್ದರಾಮಯ್ಯ, ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದೇ ದಿನ ಬಾಲ್ಕಿಯಲ್ಲಿ, ಫೆ. 4ರಂದು ಔರಾದ್, ಬೀದರ್, ಬೀದರ್ ದಕ್ಷಿಣ ಕ್ಷೇತ್ರ, ಹುಮನಾಬಾದ್‌ನಲ್ಲಿ ಸಮಾವೇಶದಲ್ಲಿ ಮಾತನಾಡಿ ಕಲಬುರಗಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆ. 6 ರಂದು ಗುಲಬರ್ಗಾ ಗ್ರಾಮೀಣ, ಚಿಂಚೋಳಿ, ಸೇಡಂ, 7ರಂದು ಆಳಂದ, ಅಫ್ಜಲಪುರ, ಯಡ್ರಾಮಿ ಜೇವರ್ಗಿ, 8ರಂದು ಚಿತ್ತಾಪುರ, 10ರಂದು ಸುರಪೂರ, ಶಹಾಪುರ, ಕಲಬುರ್ಗಿ ಉತ್ತರ ಹಾಗೂ ದಕ್ಷಿಣ, 11ರಂದು ಸಿಂಧಗಿ, ಇಂಡಿ, ನಾಗಠಾಣಾ, 12ರಂದು ಬಬಲೇಶ್ವರ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ ಕ್ಷೇತ್ರಗಳಲ್ಲಿ ಸಂಚರಿಸಲಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಡಿ.ಕೆ. ಶಿವಕುಮಾರ್ ಯಾತ್ರೆ ಕೈಗೊಳ್ಳಲಿದ್ದು, ಕೋಲಾರ ಜಿಲ್ಲೆಯಿಂದ ಯಾತ್ರೆ ಆರಂಭವಾಗಲಿದೆ. ಫೆ. 3ರಂದು ಮುಳಬಾಗಿಲು, ಕೆಜಿಎಫ್, 4ರಂದು ಮಾಲೂರು, ದೇವನಹಳ್ಳಿ, 6ರಂದು ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, 7ರಂದು ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, 8ರಂದು ಶಿಕಾರಿಪುರ, ಸೊರಬ, ಸಾಗರ, 9ರಂದು ತೀರ್ಥಹಳ್ಳಿ, ಭದ್ರಾವತಿಯ ಸಮಾವೇಶಗಳಲ್ಲಿ ಶಿವಕುಮಾರ್ ಭಾಗವಹಿಸಲಿದ್ದಾರೆ. ಇವರೊಂದಿಗೆ ಬಿ.ಕೆ. ಹರಿಪ್ರಸಾದ್, ವೀರಪ್ಪ ಮೊಯಿಲಿ, ಜಿ. ಪರಮೇಶ್ವರ, ದಿನೇಶ್ ಗುಂಡೂರಾವ್, ರೆಹಮಾನ್ ಖಾನ್, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್ ಸೇರಿದಂತೆ 54 ನಾಯಕರು ತೆರಳಲಿದ್ದಾರೆ.