ಬೆಂಗಳೂರು – ಹುಬ್ಬಳ್ಳಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಕೊನೆಯ ಬಾರಿಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದರೂ, ಸ್ಪಂದಿಸದ ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರು ಶೆಟ್ಟರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿಯಾಗಿ, ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ಆಡಳಿತ ನಡೆಸಿದ ಉತ್ತಮ ನಾಯಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾದ ಶೆಟ್ಟರ್ ಅವರಿಗೆ, ಬಿಜೆಪಿಯಲ್ಲಿ ಮುಜುಗರ ಉಂಟುಮಾಡುವ ಬೆಳವಣಿಗೆಗಳು ನಡೆದವು ನೇರ ನಡೆ-ನುಡಿಯ ನಾಯಕನಿಗೆ ಅಲ್ಲಿ ಉತ್ತಮ ಅವಕಾಶಗಳು ಸಿಗಲಿಲ್ಲ. ಜೀ,ಹುಜೂರ್, ಎನ್ನುವವರಿಗೆ ಮಾತ್ರ ಆ ಪಕ್ಷದಲ್ಲಿ ಅವಕಾಶ ಆಂತರಿಕ ಪ್ರಜಾಪ್ರಭುತ್ವ ಸಂಪೂರ್ಣ ಸತ್ತು ಹೋಗಿದೆ ಇಂಥ ಪಕ್ಷ ಮತ್ತು ನಾಯಕತ್ವದ ವಿರುದ್ಧ ಬೇಸರಗೊಂಡಿರುವ ಹಲವರು ಇದೀಗ ಮುಕ್ತ ಸ್ವಾತಂತ್ರ್ಯ ಮತ್ತು ಸಂಪೂರ್ಣ ಪ್ರಜಾತಂತ್ರ ವಾದಿ ಕಾಂಗ್ರೆಸ್ ಪಕ್ಷ ಸೇರಲು ಬರುತ್ತಿದ್ದಾರೆ ಎಂದು ಹೇಳಿದರು.

ಶೆಟ್ಟರ್ ಅವರು ಸಂಘ ಪರಿವಾರದ ಮೂಲದವರಾದರೂ ಯಾವತ್ತೂ ಕೂಡ ಜನವಿರೋಧಿಯಾಗಿ ನಡೆದುಕೊಳ್ಳಲಿಲ್ಲ. ಒಬ್ಬ ಸಜ್ಜನ ರಾಜಕಾರಣಿ. ಅವರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದೆ. ಇದು ರಾಷ್ಟ್ರ ಮಟ್ಟದಲ್ಲೂ ಬದಲಾವಣೆಯ ದಿಕ್ಸೂಚಿ ಆಗಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಮಾತನಾಡಿ, ಶೆಟ್ಟರ್ ರಾಜ್ಯದ ಸ್ವಾಭಿಮಾನಿ ರಾಜಕಾರಣಿಗಳಲ್ಲಿ ಒಬ್ಬರು. ಅವರನ್ನು ಬಿಜೆಪಿ ನಾಯಕರು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಸ್ವಾಭಿಮಾನದ ಪ್ರಶ್ನೆಗಾಗಿಯೇ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದರು.
ಶೆಟ್ಟರ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಬಂದಿದೆ. ನಮ್ಮ ಪಕ್ಷ 150ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಶೆಟ್ಟರ್, ಜನಸಂಘ ಮತ್ತು ಬಿಜೆಪಿಯಲ್ಲಿ ಸಕ್ರಿಯವಾಗಿದ್ದ ಕುಟುಂಬ ನಮ್ಮದು. ನನ್ನ ತಂದೆ ಜನಸಂಘದಿಂದ ದಕ್ಷಿಣ ಭಾರತದಲ್ಲಿ ಮೊದಲ ಮೇಯರ್ ಆಗಿದ್ದರು. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ನಾನೂ ಒಬ್ಬ. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸುವ ಮೂಲಕ ಪಕ್ಷದ ಕೆಲವರು ನನಗೆ ಅವಮಾನ ಮಾಡಿದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದರಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ ಎಂದರು.
ಲಿಂಗಾಯತ ಸಮುದಾಯದ ಹಿರಿಯ ರಾಜಕೀಯ ನಾಯಕರಲ್ಲಿ ನಾನೂ ಒಬ್ಬ. ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಈಗ ಬಿಜೆಪಿಯಲ್ಲಿ ಲಿಂಗಾಯತ ನಾಯಕರಲ್ಲಿ ನಾನೇ ಹಿರಿಯ. ಈ ಕಾರಣಕ್ಕಾಗಿಯೇ ಬಿಜೆಪಿಯ ಕೆಲವರು ನನ್ನನ್ನು ತುಳಿಯುವ ಪ್ರಯತ್ನ ಮಾಡಿದರು. ಬಿಜೆಪಿ ರಾಜ್ಯ ಘಟಕವು ಈಗ ಸಂಪೂರ್ಣವಾಗಿ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ಇದರಿಂದಾಗಿಯೇ ನನ್ನಂತಹ ಹಿರಿಯರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಏಕೆ ನಮ್ಮನ್ನು ಈ ರೀತಿ ಅವಮಾನಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಬಿಜೆಪಿ ವರಿಷ್ಠರಿಂದ ಉತ್ತರ ಬಂದಿಲ್ಲ. ಸ್ವಾಭಿಮಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ. ಇದು ನನ್ನ ಹಾಗೂ ಕಾಂಗ್ರೆಸ್ ಪಕ್ಷದ ಪಾಲಿಗೆ ಹೊಸ ಅಧ್ಯಾಯ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸಂಪೂರ್ಣವಾಗಿ ಶ್ರಮಿಸುತ್ತೇನೆ ಎಂದರು.
ಇದಾದ ನಂತರ ಶೆಟ್ಟರ್ ಅವರಿಗೆ, ಹುಬ್ಬಳ್ಳಿ-ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಬಿ ಫಾರ್ಮ್ ವಿತರಿಸಿದರು.

