ಬೆಂಗಳೂರು – ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ.
ಈ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಕೀಲ ಎ.ಪಿ.ರಂಗನಾಥ್ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.
ಕಾಂಗ್ರೆಸ್ ನ ಪುಟ್ಟಣ್ಣ ಅವರು ಬಿಜೆಪಿ–ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿದ್ದ ಎ.ಪಿ. ರಂಗನಾಥ್ ಅವರನ್ನು 1,507 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪುಟ್ಟಣ್ಣ 8,260 ಮತಗಳನ್ನು ಪಡೆದರೆ, ರಂಗನಾಥ್ 6,753 ಮತಗಳನ್ನು ಗಳಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯ ಮತದಾರರು ಫೆ.16ರಂದು ಮತದಾನ ಮಾಡಿದ್ದರು. ಒಟ್ಟು 19,152 ಮತಗಳ ಪೈಕಿ 16,544 ಮಂದಿ (ಪುರುಷರು 6,504, ಮಹಿಳೆಯರು 10,040) ಮತ ಚಲಾಯಿಸಿದರು.
ಈ ಹಿಂದೆ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರು. ಅಂದಿನಿಂದ ಖಾಲಿ ಉಳಿದಿದ್ದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಇದೀಗ ಮತ್ತೆ ಪುಟ್ಟಣ್ಣ ಗೆಲುವು ಸಾಧಿಸಿದ್ದು, ಈ ಸ್ಥಾನದ ಅವಧಿ 2026 ನವೆಂಬರ್ 11ರವರೆಗಿದೆ.
ಮತದಾರರ ಒಪ್ಪಿಗೆ ಇಲ್ಲ:
ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ಮೈತ್ರಿಯಾಗಿದೆಯೇ ವಿನಃ ಇದಕ್ಕೆ ಮತದಾರರ ಒಪ್ಪಿಗೆ ಇಲ್ಲ ಎಂಬುದನ್ನು ವಿಧಾನ ಪರಿಷತ್ ಉಪಚುನಾವಣೆ ಫಲಿತಾಂಶ ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿದೆ, ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರ ಕಪಾಳಮೋಕ್ಷ ಮಾಡಿದ್ದಾನೆ ಎಂದಿದ್ದಾರೆ.
ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣನವರಿಗೆ ಅಭಿನಂದನೆಗಳು. ಇದು ನಮ್ಮ ಸರ್ಕಾರದ 9 ತಿಂಗಳ ಜನಪರವಾದ ಆಡಳಿತ ಮತ್ತು ಸರ್ಕಾರದ ಬಗ್ಗೆ ಪ್ರಜ್ಞಾವಂತ ಮತದಾರರು ಇಟ್ಟಿರುವ ವಿಶ್ವಾಸದ ಗೆಲುವಾಗಿದೆ ಎಂದು ಬಣ್ಣಿಸಿದ್ದಾರೆ
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೊರತಾಗಿಯೂ ಸೋಲು ಕಂಡಿವೆ. ಇದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ನಡುವಿನ ಮೈತ್ರಿಯೇ ಹೊರತು ಎರಡೂ ಪಕ್ಷಗಳ ಮತದಾರರ ನಡುವಿನ ಮೈತ್ರಿಯಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಕುಟುಂಬದ ಹಿತಕ್ಕಾಗಿ ಕೋಮುವಾದಿಗಳ ಜೊತೆ ಕೈಜೋಡಿಸಿರುವ ಜೆಡಿಎಸ್ ಪಕ್ಷವನ್ನು ಹಾಗೂ ಸದಾಕಾಲ ಕುಟುಂಬ ರಾಜಕಾರಣದ ವಿರುದ್ಧ ಟೀಕೆ ಮಾಡಿ, ಒಂದು ಕುಟುಂಬವೇ ರಾಜಕೀಯ ಪಕ್ಷದಂತಿರುವ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿಯನ್ನು ಮತದಾರ ಬಂಧುಗಳ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ತಿಳಿಸಿದ್ದಾರೆ
ಸ್ವಾರ್ಥ ಸಾಧನೆಯೊಂದೇ ಗುರಿಯಾಗಿರುವ ಈ ಅಪವಿತ್ರ ಮೈತ್ರಿಗೆ ಗ್ಯಾರಂಟಿ, ವಾರೆಂಟಿ ಯಾವುದೂ ಇಲ್ಲ.ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.


1 Comment
промокоды на сегодня