ಬೆಂಗಳೂರು : ರಾಷ್ಟ್ರಪತಿ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸುತ್ತಿದ್ದಂತೆ, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.ಲೋಕಸಭೆ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಅತ್ಯಧಿಕ ಸದಸ್ಯರನ್ನು ಹೊಂದಿದ್ದು ಎನ್. ಡಿ. ಎ .ಅಭ್ಯರ್ಥಿ ಗೆಲುವು ಸುಲಭ ಎಂದು ಹೇಳಲಾಗುತ್ತಿದೆ.
ಹೀಗಿದ್ದರೂ ಬಿಜೆಪಿ ಮೈತ್ರಿ ಕೂಟಕ್ಕೆ ತಿರುಗೇಟು ನೀಡಲು ರಾಜ್ಯ ಕಾಂಗ್ರೆಸ್ ನಾಯಕರು ವಿನೂತನ ತಂತ್ರವೊಂದನ್ನು ರೂಪಿಸಿದ್ದಾರೆ.ಇದರ ಮೂಲಕ ಬಿಜೆಪಿ ಹಾಗು ಅದರ ಮಿತ್ರ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಜೊತೆಗೆ ಎನ್ ಡಿ ಎ ಅಥವ ಯುಪಿಎ ಜೊತೆಗೆ ಗುರುತಿಸಿಕೊಳ್ಳದ ಟಿಆರ್ ಎಸ್, ಬಿಜು ಜನತಾದಳ, ಟಿಎಂಸಿ ಸೇರಿದಂತೆ ಇತರೆ ಪಕ್ಷಗಳನ್ನು ಒಟ್ಟುಗೂಡಿಸುವ ಅಂಶ ಸಿದ್ದಪಡಿಸಿದ್ದಾರೆ.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ಮರೆತು ಒಂದಾಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇದೀಗ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಸೇರಿ ಎಲ್ಲಾ ಪ್ರತಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ರೂಪಿಸಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ದಲಿತ ಸಮುದಾಯಕ್ಕೆ ಸೇರಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ವರಿಷ್ಠರಿಗೆ ಮನವಿ ಮಾಡಲು ತೀರ್ಮಾನಿಸಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಕೂಟ ಶೇ.48ರಷ್ಟು ಮತಗಳನ್ನು ಹೊಂದಿದ್ದರೆ ಕಾಂಗ್ರೆಸ್ ಸೇರಿ ಉಳಿದ ಪಕ್ಷಗಳ ಮತಗಳು ಶೇ.52 ರಷ್ಟಿವೆ. ಹೀಗಾಗಿ ಎಲ್ಲಾ ಪಕ್ಷಗಳ ನಾಯಕರೊಂದಿಗೆ ಸೌಹಾರ್ದ ಸಂಬಂಧ ಹೊಂದಿರುವ ಖರ್ಗೆ ಅವರನ್ನು ಅಭ್ಯರ್ಥಿಯಾಗಿಸಿದರೆ,ತೃತೀಯ ರಂಗ ಹಾಗು ಬಿಜೆಪಿ ಜೊತೆಗಿರುವ ಜೆಡಿಯು ಸೇರಿದಂತೆ ಇತರೆ ಪಕ್ಷಗಳ ಬೆಂಬಲ ಗಳಿಸಬಹುದು ಎಂದು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರ ಲೆಕ್ಕಾಚಾರವನ್ನು ಸುರ್ಜೇವಾಲಾ ಮತ್ತು ವೇಣುಗೋಪಾಲ್ ಪಕ್ಷದ ಅಧಿನಾಯಕಿ ಸೋನಿಯಾ ಅವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರ ಸಲಹೆಯ ಮೇರೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಶ್ಚಿಮ ಬಂಗಾಳದ ಟಿಎಂಸಿ ಮುಖ್ಯಸ್ಥೆ ಹಾಗು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಎನ್‍ಸಿಪಿ ನಾಯಕ ಶರದ್ ಪವಾರ್, ಸಿಪಿಎಂನ ಸೀತಾರಾಮ್ ಯಚೂರಿ ಅವರ ಜೊತೆ ಅಭ್ಯರ್ಥಿ ಆಯ್ಕೆ ಕುರಿತು ಪ್ರಾಥಮಿಕ ಸಮಾಲೋಚನೆ ನಡೆಸಿದ್ದಾರೆ. ಖರ್ಗೆ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕುರಿತಂತೆ ಅಭಿಪ್ರಾಯ ಕೇಳಿದ್ದಾರೆನ್ನಲಾಗಿದೆ.
2017ರ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಡುವೆ ಒಡಕು ಮೂಡಿದ್ದು, ಯುಪಿಎ ಅಭ್ಯರ್ಥಿಗೆ ಮೀರಾ ಕುಮಾರ ಸೋಲು ಕಂಡಿದ್ದರು. ಅದಕ್ಕಾಗಿ ಈ ಬಾರಿ ಅಭ್ಯರ್ಥಿ ಆಯ್ಕೆ ಸಂಬಂಧ ಆರಂಭದಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸಮಾಲೋಚನೆಗೆ ಇಳಿದಿದ್ದಾರೆ. ಕಾಂಗ್ರೆಸ್ ಜೊತೆ ತೃಣಮೂಲ ಕಾಂಗ್ರೆಸ್, ಎನ್‍ಸಿಪಿ, ಶಿವಸೇನೆ ಮತ್ತು ಎಡಪಕ್ಷಗಳ ಜೊತೆ ಚರ್ಚೆಗಳು ನಡೆದಿವೆ.
Previous Articleಸಾಯಲು ಯತ್ನಿಸಿದ ಯುವಕನನ್ನು ರಕ್ಷಿಸಿದ ಪೇದೆ
Next Article ಅಕ್ಕ-ತಮ್ಮನ ಕೊಲೆ; ನಾಲ್ವರ ಸೆರೆ..