ಕೊಪ್ಪಳ.ಫೆ,22-
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಜಾತ್ಯತೀತ ವಾದದ ಪರ. ಕೋಮುವಾದ, ಬಲಪಂಥೀಯ ಧೋರಣೆಗಳ ವಿರುದ್ಧ ಕೆಂಡಕಾರುವ ಅವರು, ಕೋಮು ಪ್ರಚೋದನೆಗಳ ವಿರುದ್ಧ ಸಮರ ಸಾರುತ್ತಾರೆ. ಇಂತಹ ಸಿದ್ದರಾಮಯ್ಯ ಕೋಮುಗಲಭೆಗೆ ಪ್ರಚೋದನೆ ನೀಡುತ್ತಾರಾ?
ಹೌದು ಎನ್ನುತ್ತಾರೆ BJP ನಾಯಕಿ ಹಾಗೂ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ (Shobha Karandlaje). ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ಟಿಪ್ಪು ಜಯಂತಿ (Tipu Jayanti) ಮಾಡುವ ಮೂಲಕ ರಾಜ್ಯದಲ್ಲಿ ಕೋಮುಗಲಭೆ ಪ್ರಚೋದನೆಗೆ ಬುನಾದಿ ಹಾಕಿದರು’ ಎಂದು ದೂರಿದ್ದಾರೆ.
‘ಮುಸ್ಲಿಂ ಸಮುದಾಯದಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ. ಹೀಗಿದ್ದರೂ ಸಿದ್ದರಾಮಯ್ಯ ಮತ ಬ್ಯಾಂಕ್ ರಾಜಕಾರಣಕ್ಕೆ ಟಿಪ್ಪು ಜಯಂತಿ ಆಚರಿಸಿದರು. ಯಾವ ಮುಸ್ಲಿಮರೂ ಟಿಪ್ಪು ಜಯಂತಿ ಆಚರಣೆ ಮಾಡುವಂತೆ ಕೇಳಿರಲಿಲ್ಲ. ಆದರೂ ಜಯಂತಿ ಆಚರಣೆ ಮಾಡಿದರು. ವೀರಶೈವ ಲಿಂಗಾಯತರನ್ನು ಒಡೆಯಲು ಯತ್ನಿಸಿದರು. ಶಾಲಾ ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತಿದರು. ಒಂದು ವರ್ಗಕ್ಕೆ ಮಾತ್ರ ಶಾದಿ ಭಾಗ್ಯ ಕೊಟ್ಟಿದ್ದು ಯಾಕೆ?’ ಎಂದು ಪ್ರಶ್ನಿಸಿದ ಅವರು ಇವುಗಳಿಂದಲೇ ರಾಜ್ಯದಲ್ಲಿ ಕೋಮು ಗಲಭೆ ಗಳಿಗೆ ಪ್ರಚೋದನೆ ಸಿಕ್ಕಿತು ಎಂದು ಆಪಾದಿಸಿದರು.
‘ಸಿದ್ದರಾಮಯ್ಯ ಅವರ ಸಮುದಾಯದವರಲ್ಲಿ ಬಡ ಜನರು ಇಲ್ಲವಾ? ಅವರಿಗೇಕೆ ಭಾಗ್ಯಗಳನ್ನು ನೀಡಲಿಲ್ಲ. ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿದ್ದ PFI ಕಾರ್ಯಕರ್ತರನ್ನು ಬಿಡುಗಡೆ ಮಾಡಿಸಿದರು. ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿದರು’ ಎಂದು ಹರಿಹಾಯ್ದರು.
‘ಎಲ್ಲ ಪಕ್ಷಗಳಿಗೆ ಅವರದ್ದೇ ಆದ ತತ್ವ ಹಾಗೂ ಸಿದ್ಧಾಂತಗಳಿವೆ. ಅದಕ್ಕೆ ತಕ್ಕಂತೆ ಮಾತನಾಡಬೇಕು. ಯಾರೇ ಆಗಲಿ ಕೊಲ್ಲುವ ಬಗ್ಗೆ ಮಾತಾಡಬಾರದು. ಅದನ್ನು ಒಪ್ಪುವುದಿಲ್ಲ. ಅಶ್ವತ್ಥ ನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಟಿಪ್ಪು ಕೊಂದಂತೆಯೇ ಕೊಲೆಮಾಡಬೇಕು ಎಂದು ನೀಡಿದ ಹೇಳಿಕೆ ಸರಿಯಲ್ಲ. ಇದು ನಮ್ಮಪಕ್ಷದ ಸಿದ್ಧಾಂತ ಅಲ್ಲ. ಅಶ್ವತ್ಥನಾರಾಯಣ ಹೇಳಿಕೆ ತಪ್ಪು’ ಎಂದರು.
‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಷಯ ವಿನಾಕಾರಣ ವಿವಾದ ಆಗಬಾರದು. ಅಭಿವೃದ್ಧಿ ಬಗ್ಗೆ ಚರ್ಚಿಸೋಣ. ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು. ಡಬಲ್ ಎಂಜಿನ್ ಸರ್ಕಾರದ ಗುರಿಯೇ ದೇಶದ ಅಭಿವೃದ್ಧಿ ಹೀಗಾಗಿ ಮುಂದಿನ Electionಯಲ್ಲಿ ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಮತ ಯಾಚಿಸಲಾಗುವುದು ಎಂದು ತಿಳಿಸಿದರು.