ಬೆಂಗಳೂರು, ಫೆ.15: ಮುಂಬರುವ ಲೋಕಸಭೆ Election ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಅವರ ತತ್ವಕ್ಕೆ ಒತ್ತು ನೀಡಿ ಎಲ್ಲರನ್ನೂ ಒಳಗೊಂಡ ಕಾಯಕ ದಾಸೋಹ ಪರಿಕಲ್ಪನೆಯ ಆಧಾರದಲ್ಲಿ ಬಜೆಟ್ ಮಂಡನೆಗೆ ಸಿದ್ದರಾಗಿದ್ದಾರೆ.
ನಾಳೆ ವಿಧಾನಸಭೆಯಲ್ಲಿ ದಾಖಲೆಯ ಬಜೆಟ್ ಮಂಡಿಸಲಿರುವ ಅವರು ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹಾಗೂ ಹೊಸ ಕಾರ್ಯಕ್ರಮಗಳಿಗೆ ಬೇಕಾಗುವ ವೆಚ್ಚ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ದೃಷ್ಟಿಯಿಂದ ನಾಲ್ಕು ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ ಎಂದು ಗೊತ್ತಾಗಿದೆ.
16ನೇ ಹಣಕಾಸು ಆಯೋಗ ರಾಜ್ಯ ಸರ್ಕಾರಕ್ಕೆ ನಿಗದಿ ಮಾಡಿರುವ ಅನುದಾನದ ಮೊತ್ತ ಅತ್ಯಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೂಢೀಕರಣಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದರೂ ಕೂಡ ಚುನಾವಣೆ ಹಿನ್ನೆಲೆಯಲ್ಲಿ ಈ ಬಜೆಟ್ ನಲ್ಲಿ ಯಾವುದೇ ಹೊಸ ತೆರಿಗೆಗಳು ಇರುವುದಿಲ್ಲ ಎಂದು ಗೊತ್ತಾಗಿದೆ.
ಸಂಪನ್ಮೂಲ ಕ್ರೂಡೀಕರಣಕ್ಕಾಗಿ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಹರಾಜು ಸೇರಿದಂತೆ ಹಲವು ಹೊಸ ಮಾರ್ಗಗಳನ್ನು ಈ ಬಜೆಟ್ ನಲ್ಲಿ ಪರಿಚಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡುವ ಯೋಜನೆಗಳತ್ತ ಗಮನ ಕೇಂದ್ರೀಕರಿಸಿದ್ದಾರೆ.
ಹೊಸ ಆಸ್ಪತ್ರೆಗಳ ನಿರ್ಮಾಣ ಹಾಸ್ಟೆಲ್ ಗಳಿಗೆ ಅನುದಾನ ಹೆಚ್ಚಳ ಕೃಷಿಗೆ ಆದ್ಯತೆ ನೀಡುವ ಯೋಜನೆಗಳಿಗೆ ಪ್ರಾತಿನಿಧ್ಯ ನೀಡಿರುವ ಬಜೆಟ್ ನಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಗೊತ್ತಾಗಿದೆ.
ಹನಿ ನೀರಾವರಿ ಮತ್ತು ಸಮಗ್ರ ಕೃಷಿಗೆ ಒತ್ತು ನೀಡುವ ಪ್ರತ್ಯೇಕ ಕೃಷಿ ನೀತಿ ಒಂದನ್ನು ಘೋಷಿಸಲಿರುವ ಬಜೆಟ್ ನಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮತ್ತು ಎರಡನೇ ಹಂತದ ನಗರಗಳ ಅಭಿವೃದ್ಧಿಗೆ ಹಲವು ಯೋಜನೆಗಳು ಪ್ರಕಟವಾಗುವ ನಿರೀಕ್ಷೆ ಇದೆ.
ರಾಜ್ಯದಲ್ಲಿ 100 ಕೋಟಿ ವೆಚ್ಚದಲ್ಲಿ ಎಲ್ಲ ರಾಮಮಂದಿರಗಳ ಪುನರುಜ್ಜೀವನ ಶಿವ ಮಂದಿರ ಮಂದಿರಗಳ ಜೀರ್ಣೋದ್ಧಾರ ಹಾಗೂ ಶಕ್ತಿ ದೇವತೆಗಳ ದೇವಸ್ಥಾನಗಳ ನವೀಕರಣ ಹಾಗೂ ಮಠಗಳಿಗೆ ಅನುದಾನ ಘೋಷಿಸುವ ಸಾಧ್ಯತೆ ಇದೆ.