ಬೆಂಗಳೂರು- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಟೀಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.ಸಿದ್ದರಾಮಯ್ಯ ವಿರುದ್ಧ ಪ್ರಹಾರ ನಡೆಸಿರುವ ಬಿಜೆಪಿ ನಾಯಕರು ಮತ್ತು ಮಂತ್ರಿಗಳು ಕ್ಷಮೆ ಯಾಚನೆಗೆ ಆಗ್ರಹಿಸಿದರೆ,ತಾವು ನಿಯತ್ತಿನ ನಾಯಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ವಿಜಯನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ ಕಾಂಗ್ರೆಸ್ಸಿನವರ ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಾಯಿ ಮರಿ ತರಹ ಮಾಡುತ್ತಾರೆ. ಗಡಗಡ ಎಂದು ನಡುಗುತ್ತಾರೆ’ ಎಂದು ವ್ಯಂಗ್ಯವಾಡಿದ್ದರು.
ಹಗರಿಬೊಮ್ಮನಹಳ್ಳಿಯಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಮಾಲವಿ ಜಲಾಶಯದ ವಿಜಯೋತ್ಸವ ಹಾಗೂ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಪರೇಷನ್ ಕಮಲ’ದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ರಾಜ್ಯಕ್ಕೆ ಕೇಂದ್ರದಿಂದ ಅನುದಾನ ತರುವ ತಾಕತ್ತು, ದಮ್ಮು ಇದೆಯೇ? ರಾಜ್ಯದ ಅನೇಕ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರ ಅನುದಾನ ಕೊಡುತ್ತಿಲ್ಲ. ರಾಜ್ಯವನ್ನು ಪ್ರತಿನಿಧಿಸುವ 25 ಜನ ಸಂಸದರಿದ್ದರೂ ಏನೂ ಆಗುತ್ತಿಲ್ಲ ಎಂದು ಆಪಾದಿಸಿದರು
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಎಲ್ಲ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದೆ. 2020ರ ಫೆಬ್ರುವರಿಯಲ್ಲಿ ಮಹದಾಯಿ ಯೋಜನೆ ಗೆಜೆಟ್ ನೋಟಿಫಿಕೇಶನ್ ಆಗಿತ್ತು. ₹93 ಕೋಟಿ ಮೊತ್ತದ ಮಹದಾಯಿ ಯೋಜನಾ ವೆಚ್ಚ ಈಗ ₹1,677 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು.
ನಿಯತ್ತಿನ ನಾಯಿ:
ಇದಕ್ಕೆ ಬಳ್ಳಾರಿಯಲ್ಲಿ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಮಾತುಗಳು ಅವರ ಅವಿವೇಕತನ, ಅವರ ಸಂಸ್ಕೃತಿ, ನಡವಳಿಕೆಗಳನ್ನು ತೋರಿಸುತ್ತವೆ. ನಾಯಿ ಬಹಳ ನಿಯತ್ತಿನ ಪ್ರಾಣಿ ಎಂಬುದು ಬಹುಶಃ ಅವರಿಗೆ ಗೊತ್ತಲ್ಲವೇನೋ, ಸಿದ್ದರಾಮಯ್ಯನವರು ಏನೇ ಹೇಳಿದರೂ ನಾವೇನು ಮಾಡುತ್ತಿದ್ದೇವೆ, ಬಿಜೆಪಿ ಜನರಿಗೆ ಏನು ಮಾಡಿದೆ ಎಂದು ರಾಜ್ಯದ ಜನತೆಗೆ ಗೊತ್ತಿದೆ, ಇದೆಲ್ಲದಕ್ಕೂ ರಾಜ್ಯದ ಜನತೆ ಉತ್ತರಿಸುತ್ತಾರೆ ಎಂದರು.
ಕ್ಷಮೆ ಕೇಳಬೇಕು:
ಇದೇ ವೇಳೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಶ್ರೀರಾಮುಲು,ಸಿಎಂ ಆಗಿದ್ದ ಸಿದ್ದರಾಮಯ್ಯ ಇದೀಗ ವಿಪಕ್ಷ ಪಕ್ಷ ನಾಯಕ ಆಗಿದ್ದಾರೆ. ಇಂತಹ ಉನ್ನತ ಸ್ಥಾನದಲ್ಲಿದ್ದು, ಸಿಎಂ ಸ್ಥಾನದ ವ್ಯಕ್ತಿಯನ್ನು ನಾಯಿ ಹೋಲಿಕೆ ಮಾಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಸಿಎಂಗೆ ಹೀಗೆ ಮಾತನಾಡುವುದು ಎಷ್ಟು ಸರಿ? ಲಘುವಾಗಿ ಮಾತಾಡೋದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಸೋನಿಯಾ ಗಾಂಧಿ ಮನೆಯಲ್ಲಿ ಇಲಿ, ಬೆಕ್ಕು ಜಿರಳೆ ಸಿದ್ದರಾಮಯ್ಯ ಇರುತ್ತಾರೆ ಎಂದು ನಾವು ಹೇಳಬಹುದು. ಆದರೆ ನಾವು ಆ ರೀತಿ ಹೇಳುವುದಿಲ್ಲ. ಅದು ನಮ್ಮ ಸಂಸ್ಕೃತಿಯಲ್ಲ. ಸಿಎಂ ಬಗ್ಗೆ ಲಘುವಾಗಿ ಮಾತಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.ಸಿಎಂ ಸ್ಥಾನಕ್ಕೆ ಅಗೌರವ ತೋರಿದ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಪ್ರತಿಕ್ರಿಯಿಸಿ,ಮುಖ್ಯಮಂತ್ರಿಯವರ ವಿರುದ್ಧ ಸಿದ್ದರಾಮಯ್ಯ ಮಾಡಿರುವ ಟೀಕೆ ಅಸಭ್ಯ ಎಂದು ಖಂಡಿಸಿದ್ದಾರೆ.
ಬೊಮ್ಮಾಯಿ ಈ ರಾಜ್ಯ ಕಂಡ ಒಬ್ಬ ಅತ್ಯುತ್ತಮ ಮತ್ತು ಸರಳ- ಸಜ್ಜನ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಸಿದ್ದರಾಮಯ್ಯನವರಿಂದ ಶಿಫಾರಸು ಬೇಕಿಲ್ಲ. ಆದರೆ ಅವರು ಪ್ರತಿಪಕ್ಷದ ನಾಯಕ ಹುದ್ದೆಯ ಘನತೆ ಗೌರವ ಕಾಯ್ದುಕೊಂಡು ಮಾತನಾಡಬೇಕಾಗುತ್ತದೆ.ಸಿದ್ದರಾಮಯ್ಯನವರು ಈ ರೀತಿಯಾಗಿ ಬೇಕಾಬಿಟ್ಟಿಯಾಗಿ ಮಾತನಾಡುವ ಮೂಲಕ ಪ್ರತಿಪಕ್ಷದ ನಾಯಕರ ಹುದ್ದೆಯ ಘನತೆಗೆ ಕಳಂಕ ತಂದಿದ್ದಾರೆ.ಎಂದು ಆಪಾದಿಸಿದ್ದಾರೆ.
ಈವರೆಗೂ ತಮ್ಮ ಮುಂದಿನ ಚುನಾವಣಾ ಕ್ಷೇತ್ರದ ಬಗ್ಗೆ ನಿರ್ಧರಿಸಲಾಗದಷ್ಟು ದುರ್ಬಲರಾಗಿರುವ ಸಿದ್ದರಾಮಯ್ಯನವರು, ಬೇರೆಯವರ ಬಲ ದೌರ್ಬಲ್ಯಗಳ ಬಗ್ಗೆ ಮಾತನಾಡುವುದೆಂದರೆ ಗಾಜಿನ ಮನೆಯಲ್ಲಿ ಕುಳಿತು ಹೊರಗೆ ಕಲ್ಲೆಸೆದಂತೆಯೇ ಸರಿ. ಜನರೇ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಾರೆ.
ಆಡುಭಾಷೆ:
ಈ ಎಲ್ಲಾ ಟೀಕೆಗಳಿಗೆ ಮತ್ತೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಗಳ ಬಗ್ಗೆ ಹಳ್ಳಿಗಾಡಿನಲ್ಲಿ ಬಳಸುವ ಆಡುಭಾಷೆಯಲ್ಲಿ ಮಾತನಾಡಿದ್ದೇನೆ ಇದರಲ್ಲಿ ತಪ್ಪಾಗುವಂತದ್ದೇನೂ ಇಲ್ಲ ಎಂದಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾವು ಮುಖ್ಯಮಂತ್ರಿಗಳ ಬಗ್ಗೆ ದುರುದ್ದೇಶದಿಂದ ಮಾತನಾಡಿಲ್ಲ ಆಡುಭಾಷೆಯಲ್ಲಿ ಮಾತನಾಡಿದ್ದೇನೆ ಅಷ್ಟೇ ಎಂದರು.
Previous ArticleSM Krishna ಸಕ್ರಿಯ ರಾಜಕಾರಣದಿಂದ ನಿವೃತ್ತಿ
Next Article ಸಾಂಟ್ರೋ ರವಿ ಜತೆ ಸಚಿವರ ನಂಟು – ಬಿಡಿಸಲಾರದ ಗಂಟು