ಸಿದ್ದರಾಮಯ್ಯಗೆ ಆರ್ಥಿಕತೆ ಏನು ಗೊತ್ತು ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹೌದು ನಾನು ಆರ್ಥಿಕ ತಜ್ಞ ಅಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡಿರುವ ವಕೀಲ. ಹೈಕೋರ್ಟ್ ಸುಪ್ರೀಂಕೋರ್ಟ್ ನಲ್ಲೂ ಪ್ರಾಕ್ಟಿಸ್ ಮಾಡಿಲ್ಲ. ನಾನು ಆರ್ಥಿಕತೆ ಬಗ್ಗೆ ಮಾತನಾಡಿರೋದು ತಪ್ಪು, ಸರಿ ಎಂದು ಹೇಳಲು ಪ್ರತಾಪ್ ಸಿಂಹ ಆರ್ಥಿಕ ತಜ್ಞನಾ? ಯಡಿಯೂರಪ್ಪ, ಬೊಮ್ಮಾಯಿ ಆರ್ಥಿಕ ತಜ್ಞರೇ…? ನಾನು ಓದಿದ ಲಾ ಬಗ್ಗೆ ಪ್ರಶ್ನಿಸಲು ಪ್ರತಾಪ್ ಸಿಂಹ, ಮೋದಿ ಇಬ್ಬರೂ ವಕೀಲರಾ.? ಮೋದಿ, ಪ್ರತಾಪ್ ಸಿಂಹನಿಗೆ ಆರ್ಥಿಕತೆ ಬಗ್ಗೆ ಏನು ಗೊತ್ತಾಗುತ್ತದೆ. ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಗುಡುಗಿದರು.
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೂ ಪ್ರತಾಪ್ ಸಿಂಹಗೂ ಏನು ಸಂಬಂಧ. ಪ್ರತಾಪ್ ಸಿಂಹ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಕಿಮೀ ಹೆದ್ದಾರಿ ಬರುತ್ತೆ. ನಾನು ಮೈಸೂರಿಗೆ ಏನು ಮಾಡಿದ್ದೇನೆ, ಅವ್ರು ಏನು ಮಾಡಿದ್ದಾರೆ ಚರ್ಚೆಗೆ ಬರಲಿ. ಚರ್ಚೆಗೆ ನಾನು ಬರುವುದಿಲ್ಲ ನಮ್ಮ ಪಕ್ಷದ ವಕ್ತಾರರನ್ನ ಕಳುಹಿಸುತ್ತೇನೆ. ದಾಖಲೆ ಸಮೇತ ಬಂದು ಚರ್ಚೆ ಮಾಡಲಿ. ಮೈಸೂರು ವಿಮಾನ ಉನ್ನತೀಕರಣ ಯಾರ ಕಾಲದಲ್ಲಿ ಆಗಿದ್ದು, ಪ್ರತಾಪ್ ಆ ಸಿಂಹನಿಗೆ ಏನು ಗೊತ್ತು ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಜೆಡಿಎಸ್‌ನಿಂದ ದಲಿತ, ಖರ್ಗೆ ಅಸ್ತ್ರ ಬಳಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ದಲಿತರಿಗೆ ನಾವು ಏನ್ ಮಾಡಿದ್ದೀವಿ ಅಂತ ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹೆಚ್ಚು ಆದ್ಯತೆ ಕೊಟ್ಟಿದ್ದು ದಲಿತರಿಗೆ. ದಲಿತರಿಗೆ ಕಾಂಗ್ರೆಸ್ ನಲ್ಲಿ ಹೆಚ್ಚು ಸ್ಥಾನಮಾನ ನೀಡಲಾಗಿದೆ. ಹೀಗಾಗಿ ಜೆಡಿಎಸ್ ನವರಿಂದ ಹೇಳಿಸಿಕೊಳ್ಳಬೇಕೆನ್ರಿ..? ಎಂದು ಹರಿಹಾಯ್ದರು.