ಬೆಂಗಳೂರು,ಫೆ.16- ಮುಂಬರುವ ಲೋಕಸಭಾ Electionಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಲ್ಲಾ ವರ್ಗ ಮತ್ತು ಸಮುದಾಯಗಳನ್ನು ಒಲೈಸುವ ಯೋಜನೆಗಳನ್ನೊಳಗೊಂಡ ದಾಖಲೆಯ 3.71 ಲಕ್ಷ ಕೋಟಿ ರೂ.ಗಳ ಅಂದಾಜು ವೆಚ್ಚದ ಬೃಹತ್ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಮಂಡಿಸಿದರು.
ಸಂಪನ್ಮೂಲ ಕ್ರೋಡೀಕರಣಕ್ಕೆ ಹಲವಾರು ಮಾರ್ಗಗಳನ್ನು ಹುಡುಕಿರುವ ಸಿದ್ದರಾಮಯ್ಯ ಅವರು,ಭಾರತೀಯ ತಯಾರಿಕಾ ಮದ್ಯ (ಐಎಂಎಲ್) ಮತ್ತು ಬಿಯರ್ ದರಗಳನ್ನು ನೆರೆರಾಜ್ಯಗಳ ಸ್ಲಾಬ್‍ಗನುಗುಣವಾಗಿ ಪರಿಷ್ಕರಿಸುವುದಾಗಿ ಪ್ರಕಟಿಸಿದ್ದು15ನೇ ಬಜೆಟ್ ಮಂಡನೆ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಕೇಂದ್ರ ಸರ್ಕಾರದಿಂದ 44,885 ಕೋಟಿ ರೂ.ಗಳ ತೆರಿಗೆ ಪಾಲು 15,300 ಕೋಟಿ ರೂ.ಗಳ ಸಹಾಯಧನ ಬರುವ ನಿರೀಕ್ಷೆಯಿದೆ. ಜೊತೆಗೆ 1,05,245 ಕೋಟಿ ರೂ.ಗಳ ಸಾಲ ಮಾಡುವ ಮುನ್ಸೂಚನೆ ನೀಡಿದ್ದಾರೆ. 38 ಕೋಟಿ ರೂ.ಗಳ ಋಣೇತರ ಸ್ವೀಕೃತಿ ಮತ್ತು 213 ಕೋಟಿ ರೂ.ಗಳ ಸಾಲ ವಸೂಲು ಮೊತ್ತವನ್ನು ಅಂದಾಜಿಸಿ ಒಟ್ಟು ಸಂಪನ್ಮೂಲವನ್ನು 3,68,674 ಕೋಟಿ ರೂ.ಗಳೆಂದು ಲೆಕ್ಕ ಹಾಕಿದ್ದಾರೆ. ಇದರ ಜೊತೆ ವೆಚ್ಚಗಳ ಬಾಬ್ತಿನಲ್ಲಿ 2,90,531 ಕೋಟಿ ರೂ.ಗಳ ರಾಜಸ್ವ ವೆಚ್ಚವನ್ನು ನಿಗದಿ ಮಾಡಿದ್ದಾರೆ. ಬಂಡವಾಳ ವೆಚ್ಚಕ್ಕೆ 55,877 ಕೋಟಿ ರೂ.ಗಳನ್ನು ನಿಗದಿ ಮಾಡಿದ್ದರೆ ಸಾಲದ ಮರುಪಾವತಿಗೆ 24,974 ಕೋಟಿ ರೂ.ಗಳನ್ನು ಕಾಯ್ದಿರಿಸಿದ್ದಾರೆ.
ಮುಂದಿನ ಆರ್ಥಿಕ ವರ್ಷದಲ್ಲಿ 27,354 ಕೋಟಿ ರೂ.ಗಳನ್ನು ರಾಜಸ್ವ ಕೊರತೆ ಎಂದು ಹಾಗೂ 82,595 ಕೋಟಿ ರೂ.ಗಳನ್ನು ವಿತ್ತೀಯ ಕೊರತೆ ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯು ರಾಜ್ಯದ ಜಿಎಸ್‍ಡಿಪಿಯ ಶೇ.2.95 ರಷ್ಟಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಮುಂದಿನ ಆರ್ಥಿಕ ವರ್ಷಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆ 6,65,095 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಬೃಹತ್ ಮೊತ್ತದ ಸಾಲವನ್ನು ಬಿಂಬಿಸಲಾಗಿದೆ. ಆದರೂ ಆರ್ಥಿಕ ಶಿಸ್ತಿನ ಮಿತಿ ಶೇ.25 ರೊಳಗೆ ಸಾಲದ ಮೊತ್ತವಿದ್ದು, ಒಟ್ಟು ಜಿಎಸ್‍ಡಿಪಿಯ ಶೇ.23.68 ರಷ್ಟಿದೆ ಎಂದು ತಿಳಿಸಿದ್ದಾರೆ.
ವಿತ್ತೀಯ ಕೊರತೆಯನ್ನು ಶೇ.3 ರೊಳಗೆ, ಹೊಣೆಗಾರಿಕೆ ಶೇ.25 ರೊಳಗೆ ಕಾಯ್ದುಕೊಳ್ಳಲಾಗಿದೆ. ಮಧ್ಯಮಾವ ವಿತ್ತೀಯ ಯೋಜನೆಯಲ್ಲಿ ಅಂದಾಜಿಸಿರುವಂತೆ ಇನ್ನೆರೆಡು ವರ್ಷದೊಳಗೆ ರಾಜಸ್ವ ಹೆಚ್ಚುವರಿಯನ್ನು ಸಾಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಯವರು ಲೇಖಾನುದಾನದ ಬದಲಿಗೆ ಪೂರ್ಣ ಪ್ರಮಾಣದ ಬಜೆಟ್‍ಗೆ ಅಂಗೀಕಾರ ನೀಡುವಂತೆ ಮನವಿ ಮಾಡಿದ್ದಾರೆ.
ನಮ್ಮ ಮಿಲೆಟ್ ಎಂಬ ಹೊಸ ಕಾರ್ಯಕ್ರಮದ ಮೂಲಕ ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಆದ್ಯತೆ ನೀಡುವುದು, ಎಪಿಎಂಸಿ ಕಾಯ್ದೆ ಹಿಂಪಡೆಯುವುದು, ಎತ್ತಿನ ಹೊಳೆ ಯೋಜನೆಗೆ ಸಮತೋಲನ ಜಲಾಶಯ ನಿರ್ಮಾಣ ಕಾಮಗಾರಿ ಆರಂಭಿಸುವುದು, ಪಾವಗಡ ಸೋಲಾರ್ ಪಾರ್ಕ್ ಮಾದರಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಜಲಾಶಯಗಳ ಹಿನ್ನೀರಿನ ಪ್ರದೇಶಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ, ಶಾಲಾ-ಕಾಲೇಜುಗಳ ಸಾಮರಸ್ಯಕ್ಕಾಗಿ ನಾವು ಮನುಜರು ಎಂಬ 2 ಗಂಟೆಗಳ ವಿಚಾರ ವಿಮರ್ಶೆ ಮತ್ತು ಸಂವಾದಗಳನ್ನು ಆಯೋಜಿಸುವುದು, ರಾಜ್ಯ ಶಿಕ್ಷಣ ನೀತಿ ಅನುಷ್ಠಾನ, ಬೇರು ಚಿಗುರು ಎಂಬ ವಿನೂತನ ಕಾರ್ಯಕ್ರಮದ ಮೂಲಕ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹಳೆ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದು, ಪ್ರೇರಣಾ ಯೋಜನೆಯ ಮೂಲಕ ತಾಂತ್ರಿಕ ಶಿಕ್ಷಣ ಉನ್ನತೀಕರಣ ಬಜೆಟ್‍ನ ಪ್ರಮುಖ ಅಂಶಗಳಾಗಿವೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದು ವಿರೋಧಿಗಳ ಭವಿಷ್ಯವನ್ನು ನಾವು ಸುಳ್ಳು ಮಾಡಿದ್ದೇವೆ. 5 ಖಾತರಿ ಯೋಜನೆಗಳಷ್ಟೇ ಅಲ್ಲದೆ ಹಲವಾರು ಹೊಸ ಕಲ್ಯಾಣ ಯೋಜನೆಗಳಿಗೂ ಮತ್ತು ಮೂಲ ಸೌಕರ್ಯ ಕಾರ್ಯಕ್ರಮಗಳಿಗೂ ಅಗತ್ಯವಿರುವ ಆಯವ್ಯಯವನ್ನು ಒದಗಿಸಿದ್ದೇವೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಪ್ರತಿಯೊಬ್ಬರ ಕಣ್ಣೀರನ್ನು ಒರೆಸುವುದು ಮಹಾತ್ಮ ಗಾಂಧೀಜಿಯವರ ಆಶಯವಾಗಿದೆ. ಇದು ನಮ್ಮ ಇತಿಮಿತಿಯನ್ನು ಮೀರಿದ್ದಾಗಿರಬಹುದು. ಆದರೆ ಕಣ್ಣೀರು ಮತ್ತು ಬವಣೆಗಳು ಇರುವವರೆಗೂ ನಮ್ಮ ಕಾರ್ಯ ಪೂರ್ಣವಾಗುವುದಿಲ್ಲ ಎಂದು ನೆಹರೂ ಅವರ ವಾಣಿಯನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ, ಹೆಚ್ಚುತ್ತಿರುವ ಅಸಮಾನತೆ ಮತ್ತು ನಿರುದ್ಯೋಗದಿಂದ ಜರ್ಜರಿತರಾಗಿರುವ ಜನಸಮಾನ್ಯರು, ರೈತರು, ಯುವಜನರು ಹಾಗೂ ಸಮಾಜಕ ಕಟ್ಟಕಡೆಯ ವರ್ಗದವರಿಗೆ ಅಗತ್ಯವಿರುವ ಬೆಂಬಲವನ್ನು ಒದಗಿಸಲು ಸಮಗ್ರ ಮತ್ತು ಸಮೃದ್ಧ ಕರ್ನಾಟಕವನ್ನು ಕಲ್ಪಿಸುವ ದೃಷ್ಟಿಕೋನದೊಂದಿಗೆ ಕಲ್ಯಾಣ ಆಧಾರಿತ ಬಜೆಟ್ ಅನ್ನು ಮಂಡಿಸುತ್ತಿದ್ದೇನೆ ಎಂದು ವಿವರಿಸಿದ್ದಾರೆ.