ಬೆಂಗಳೂರು,ಸೆ.21- ಸೈಮಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಬಂದಿದ್ದ ಕಲಾವಿದರು ಉಳಿದುಕೊಂಡಿದ್ದ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯು ಮ್ಯಾರಿಯೇಟ್ ಹೋಟೆಲ್ ವಿರುದ್ಧ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನಿಗಧಿತ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದ ಮೇಲೆ ಹೋಟೆಲ್ನ ಮ್ಯಾನೇಜರ್ ಹಾಗೂ ಪಾರ್ಟಿ ಆರ್ಗನೈಸರ್ ವಿರುದ್ಧ ಎಫ್ಐರ್ ದಾಖಲಿಸಿ ನೋಟೀಸ್ ಜಾರಿ ಮಾಡಲಾಗಿದೆ.
ಕಳೆದ ಆ.12ರಂದು ರಾತ್ರಿ 3.30 ಗಂಟೆವರೆಗೆ ಪಾರ್ಟಿ ನಡೆಸಿರುವ ಆರೋಪ ಕೇಳಿಬಂದಿದೆ. ಕಾನೂನಿನ ಪ್ರಕಾರ ಒಂದು ಗಂಟೆಗೆ ಪಾರ್ಟಿ ಮುಗಿಯಬೇಕಿತ್ತು. ಆದರೆ, ಕಾನೂನು ನಿಯಮಗಳನ್ನು ಗಾಳಿಗೆ ತೂರಿ ನಸುಕಿನ ಜಾವ 3.30ರವರೆಗೂ ಪಾರ್ಟಿ ನಡೆಸಿರುವ ಆರೋಪ ಕೇಳಿಬಂದಿದೆ. 1 ಗಂಟೆಗೆ ಮುಗಿಸಬೇಕೆಂದು ಸೂಚನೆ ನೀಡಿದ್ದರೂ ಸಹ ಅದಕ್ಕೆ ಕ್ಯಾರೆ ಎನ್ನದೆ ಪಾರ್ಟಿ ನಡೆಸಿರುವ ಆರೋಪವಿದೆ.
ನಗರದಲ್ಲಿ ನಡೆದಿದ್ದ ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದ ಸ್ಟಾರ್ಗಳು ಈ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಸ್ಟಾರ್ಗಳು ಪಾರ್ಟಿಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಎರಡು ಬಾರಿ ಅವಧಿ ಮೀರಿ ಪಾರ್ಟಿ ಮಾಡಿದ್ದ ಆರೋಪ ಹೋಟೆಲ್ ಸಿಬ್ಬಂದಿ ಮೇಲಿದೆ. 2 ಬಾರಿಯು ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟು ಕಳುಹಿಸಿದ್ದರು. ಆದರೆ, ಈಗ ಮತ್ತೊಮ್ಮೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಸದ್ಯ ಪ್ರಕರಣ ದಾಖಲಾಗಿದ್ದು, ಪಾರ್ಟಿಯಲ್ಲಿ ಏನಾದರೂ ಅಕ್ರಮ ಚಟುವಟಿಕೆ ನಡೆದಿದೆಯಾ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಳೆಹಾಕುತ್ತಿದ್ದು, ತನಿಖೆ ಮುಂದುವರಿದಿದೆ.
ಅದ್ದೂರಿ ಸಮಾರಂಭ:
ಚಿತ್ರರಂಗದಲ್ಲಿ ಸೈಮಾ ಅವಾರ್ಡ್ಸ್ಗೆ ಮನ್ನಣೆ ಇದೆ. ಕಳೆದ 10 ವರ್ಷಗಳಿಂದ ಬಹಳ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ. ಇದರಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಇಷ್ಟು ವರ್ಷ ಹೊರರಾಜ್ಯದಲ್ಲಿ ಹಾಗೂ ವಿದೇಶದಲ್ಲಿ ಈ ಸಮಾರಂಭ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೈಮಾ ಕಾರ್ಯಕ್ರಮ ನಡೆಯಿತು. ಆದರೆ ಕಾರ್ಯಕ್ರಮದ ನಂತರ ಜರುಗಿದ ಪಾರ್ಟಿಯಲ್ಲಿ ನಿಯಮ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಕಾನೂನಿನ ಸಂಕಷ್ಟ ಎದುರಾಗಿದೆ.
Previous ArticlePayCM-ಹೆಸರು ಕೆಡಿಸಲು ಮಾಡಿದ ಪಿತೂರಿ
Next Article ಪುಟಿನ್ ಹಾಕಿದ ನ್ಯೂಕ್ಲಿಯರ್ ಧಮ್ಕಿ