ಬೆಂಗಳೂರು:
IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಹಾಗೂ IPS ಅಧಿಕಾರಿ ಡಿ.ರೂಪಾ (D Roopa) ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜಕಾರಣಿಗಳನ್ನು ಮೀರಿಸುವಂತೆ ಈ ಇಬ್ಬರೂ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ – ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಆಡಳಿತ ಯಂತ್ರದ ಮೇಲೆ ದೊಡ್ಡ ಪರಿಣಾಮ ಬೀರಿದೆ.
IAS, IPS ಅಧಿಕಾರಿಗಳಿಗೆ ನಿರ್ದಿಷ್ಟ ಸೇವಾ ನಿಯಮಗಳಿವೆ. ಯಾರೂ ಕೂಡ ಇವುಗಳನ್ನು ಉಲ್ಲಂಘಿಸಿ ಈ ರೀತಿಯಲ್ಲಿ ಏಕಾಏಕಿ ಮಾತನಾಡುವಂತಿಲ್ಲ. ಈ ಅಧಿಕಾರಿಗಳು ಹೇಳಿಕೆ ನೀಡುವ ಮುನ್ನ ತಮ್ಮ ಹಿರಿಯ ಅಧಿಕಾರಿ ಇಲ್ಲವೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಮತಿ ಪಡೆಯುವುದು ಕಡ್ಡಾಯ ಇಲ್ಲವಾದರೆ ಇದು ನಿಯಮಗಳ ಉಲ್ಲಂಘನೆಯಾಗಲಿದೆ.
ಆದರೆ, ಈ ಪ್ರಕರಣದಲ್ಲಿ ಇಬ್ಬರೂ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ನಡೆಸಿರುವ ವಾಕ್ಸಮರ ಆಡಳಿತ ಯಂತ್ರ ನಿಯಂತ್ರಣದಲ್ಲಿ ಇಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲವೇನೋ ಎಂಬ ಅಭಿಪ್ರಾಯ ಮೂಡುತ್ತದೆ. ಇದರ ನಡುವೆ ಕೆಲವು ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ. ಅದರಲ್ಲೂ ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ಡಿ.ರೂಪಾ ಮಾಡಿರುವ ಆರೋಪಗಳನ್ನು ವೈಯಕ್ತಿಕ ಎನ್ನುವುದಕ್ಕಿಂತ ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿ ನೋಡಬೇಕಾದ ಅಗತ್ಯವಿದೆ. ಡಿ.ರೂಪಾ ಆರೋಪ ಮಾಡಿರುವುದು ಹಿರಿಯ ಅಧಿಕಾರಿಯ ವಿರುದ್ಧ. ಅದೂ ಕೂಡ ಆ ಅಧಿಕಾರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕಾನೂನು ಕ್ರಮ ಜರುಗಿಸಬೇಕಾದ ರಾಜ್ಯ ಸರ್ಕಾರವೇ ಅವರಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಂಧೂರಿ ಮಂಡ್ಯದಲ್ಲಿದ್ದಾಗ ಶೌಚಾಲಯ ನಿರ್ಮಾಣದ ವಿಚಾರದಲ್ಲಿ ಸುಳ್ಳು ಅಂಕಿ – ಅಂಶಗಳನ್ನು ನೀಡಿ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪಡೆದುಕೊಂಡಿದ್ದರು. ಚಾಮರಾಜನಗರ (Chamarajanagar) ದಲ್ಲಿ ಆಮ್ಲಜನಕದ ಕೊರತೆಯಿಂದ 24 ಜನರು ಮೃತಪಟ್ಟಾಗ ಇವರ ಮೇಲೆ ನೇರ ಆರೋಪ ಬಂದರೂ ಪಾರಾದರು. ಅಗ್ಗದ ಬೆಲೆಯ ಚೀಲಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿದ ಪ್ರಕರಣದಲ್ಲಿ ಲೋಕಾಯುಕ್ತರು ತನಿಖೆಗೆ ಶಿಫಾರಸು ಮಾಡಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಇಂತಹ ರಕ್ಷಣೆ ಕನ್ನಡಿಗ ಅಧಿಕಾರಿಗಳಿಗೆ ಸಿಗಲು ಸಾಧ್ಯವೇ ಎಂದು ಕೇಳಿದ್ದಾರಾದರೂ ಇಲ್ಲಿ ಕನ್ನಡಿಗ ಅನ್ನುವುದನ್ನು ಹೊರತು ಪಡಿಸಿ ಸಿಂಧೂರಿ ವಿರುದ್ಧ ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ.
ಭ್ರಷ್ಟಾಚಾರ, ಆಮ್ಲಜನಕ ಕೊರತೆಯಿಂದ ಅಮೂಲ್ಯ ಜೀವಗಳು ಬಲಿಯಾದ ವಿಷಯ, ದುಬಾರಿ ಬೆಲೆಗೆ ಮಾರಾಟ ಇವೆಲ್ಲವನ್ನೂ ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಯಲ್ಲಿ ನೋಡಬೇಕಾಗುತ್ತದೆ. ಉನ್ನತ ಮಟ್ಟದ ತನಿಖೆ ಅಗತ್ಯವಿದೆ. ಇಲಾಖಾ ಮಟ್ಟದ ತನಿಖೆಗಳು ಸಂಶಯಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಇಲ್ಲವೇ ಇಂತಹುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕಾದ ಅಗತ್ಯವಿದೆ. ಇಲ್ಲವಾದರೆ ಸಾರ್ವಜನಿಕ ವಲಯದ ಸಂಶಯ ಉಳಿಯಲಿದೆ.
ಇದಷ್ಟೇ ಅಲ್ಲ, ಸಿಂಧೂರಿ ಅವರಿಂದಾಗಿ ಹಲವು ಮಂದಿ ಪುರುಷ IAS, IPS ಅಧಿಕಾರಿಗಳು ತೊಂದರೆ ಅನುಭವಿಸಿದ್ದಾರೆ. ಯೋಗ್ಯವಲ್ಲದ ಫೋಟೊಗಳನ್ನು ಪುರುಷ ಅಧಿಕಾರಿಗಳಿಗೆ ಕಳುಹಿಸಿ ಪ್ರಚೋದನೆ ನೀಡಿರುವುದಕ್ಕೂ ತಮ್ಮ ಬಳಿ ಸಾಕ್ಷ್ಯಗಳಿವೆ’ ಎಂದು ರೂಪಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದೂ ಕೂಡ ಗಂಭೀರವಾದ ವಿಷಯವೇ. ಒಬ್ಬ ಅಧಿಕಾರಿ ಈ ರೀತಿಯಲ್ಲಿ ತಮ್ಮ ಪೋಟೋಗಳನ್ನು ಕಳುಹಿಸಿದ್ದಾರೆಂದರೆ ಅದನ್ನು ಯಾರಿಗೆ ಯಾಕಾಗಿ ಕಳುಹಿಸಿದ್ದಾರೆನ್ನುವುದು ಬಹಿರಂಗವಾಗಬೇಕಿದೆ. ಯಾಕೆಂದರೆ ರೂಪಾ ಅವರು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ಇದೀಗ ಸಾರ್ವಜನಿಕ ವಿಷಯವಾಗಿ ಪರಿಣಮಿಸಿದೆ.
ಹೀಗಾಗಿ ಈ ಪೋಟೋಗಳನ್ನು ಯಾವ್ಯಾವ ಅಧಿಕಾರಿಗಳಿಗೆ ಯಾವ ಕಾರಣಕ್ಕಾಗಿ ಕಳುಹಿಸಿದರು. ಐದಾರು ಪುರುಷ IAS ಅಧಿಕಾರಿಗಳಿಗೆ ಕಳುಹಿಸಿದ್ದಾರೆಂದು ರೂಪಾ ಹೇಳಿದ್ದಾರೆ ಇದು ನಿಜವಾ? ಹಾಗಿದ್ದಲ್ಲಿ ವಿವರ ಬಹಿರಂಗವಾಗಬೇಕು ಇಲ್ಲವೇ ಪ್ರಚಾರಕ್ಕಾಗಿ ಡಿ.ರೂಪಾ ಈ ರೀತಿಯಲ್ಲಿ ಮಾಡಿದ್ದರೆ, ಅವರ ವಿರುದ್ಧ ಕ್ರಮ ಜರುಗಿಸಲೇಬೇಕು. ಇವೆಲ್ಲದರ ನಡುವೆ, ಸಿಂಧೂರಿ ಅವರು ಮಂಡ್ಯ (Mandya) ದಲ್ಲಿ ಕೆಲಸ ಮಾಡುವ ವೇಳೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ (Siddaramaiah ) ಅವರನ್ನು ಶಿಷ್ಟಾಚಾರದ ಪ್ರಕಾರ ಒಮ್ಮೆಯೂ ಸ್ವಾಗತಿಸಿಲ್ಲ. ಮೈಸೂರಿನಲ್ಲಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ (S T Somashekar) ಸಭೆ ನಡೆಸುತ್ತಿದ್ದರೆ ಸಭೆಯ ಮಧ್ಯ ದೂರವಾಣಿ ಕರೆ ಸ್ವೀಕರಿಸುವ ನೆಪದಲ್ಲಿ ಹೋಗುತ್ತಿದ್ದವರು ಮತ್ತೆ ಸಭೆಗೆ ಬರುತ್ತಿರಲಿಲ್ಲ ಎಂಬ ಆರೋಪಗಳಿವೆ. ಈ ಎಲ್ಲವೂ ಈಗ ತನಿಖೆಗೆ ಅರ್ಹ.