ಮಂಗಳೂರು,ಆ.28-
ಅಸಹಜ ಸಾವುಗಳ ಪ್ರಕರಣದಿಂದ ಸುದ್ದಿಯಾಗಿರುವ ಧರ್ಮಸ್ಥಳದಲ್ಲಿ ತನ್ನ ಮಗಳು ಅನನ್ಯಾ ಭಟ್ ಅನುಮಾನಾಸ್ಪದವಾಗಿ ಕಾಣೆಯಾಗಿದ್ದು, ಬಹುಶಃ ಅವಳು ಸಾವಿಗೀಡಾಗಿರಬಹುದು ಇದಕ್ಕೆ ನ್ಯಾಯ ಕೊಡಿಸಿ ಎಂದು ಎಂದು ಹೇಳಿಕೊಂಡು ಬಂದಿದ್ದ ಸುಜಾತಾ ಭಟ್ ಇದೀಗ ಉಲ್ಟಾ ಹೊಡೆದಿದ್ದಾರೆ
ಇಡೀ ದಿನ ಬೆಳ್ತಂಗಡಿಯ ಎಸ್‌ಐಟಿ ಮುಂದೆ ವಿಚಾರಣೆ ಎದುರಿಸಿದ್ದು, ಅಂದು ತಾನು ಹೇಳಿದ್ದೆಲ್ಲಾ ಕಪೋಲಕಲ್ಪಿತ,ದೂರು ಸಂಪೂರ್ಣ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ.
ಅಷ್ಟೇ ಅಲ್ಲ ಈಗ ನನಗೆ ತಪ್ಪಿನ ಅರಿವಾಗಿದೆ ಹೀಗಾಗಿ ನಾನು ಕೊಟ್ಟ ದೂರು ವಾಪಸ್ ಪಡೆಯಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ ಎಂದು ಎಸ್ ಐಟಿ ಮೂಲಗಳಿಂದ ತಿಳಿದುಬಂದಿದೆ.
ಕ್ಷಣಕ್ಕೊಂದು ಮಾತನಾಡುತ್ತ, ಒಂದೊಂದು ಮೀಡಿಯಾದ ಮುಂದೆ ಒಂದೊಂದು ಕಥೆ ಕಟ್ಟುತ್ತ ಇಡೀ ರಾಜ್ಯವನ್ನೇ ಗೊಂದಲಕ್ಕೆ ಬೀಳುವಂತೆ ಮಾಡಿದ್ದ ಸುಜಾತ ಭಟ್, ಇದೀಗ ಮತ್ತೊಂದು ಯಡವಟ್ಟಿಗೆ ಸಿದ್ಧವಾಗಿದ್ದಾರೆ.
ತನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಳು ಎಂದು ಆರೋಪ ಮಾಡಿರುವ ಸುಜಾತಾ ಭಟ್ ಪ್ರಕರಣ ಸಂಬಂಧ ಎಸ್‌ಐಟಿ ತನಿಖಾಧಿಕಾರಿ ಗುಣಪಾಲ್ ಅವರಿಂದ ಸತತ ವಿಚಾರಣೆ ಎದುರಿಸುತ್ತಿದ್ದಾರೆ. ಈ ವೇಳೆ ಸುಜಾತಾ ಭಟ್ ನಾನು ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ, ಈ ಪ್ರಾಯದಲ್ಲಿ ನನಗೆ ತನಿಖೆ ಎದುರಿಸೋಕೆ ಅಸಾಧ್ಯ. ನ್ಯಾಯ ಸಿಗೋಕೆ ಇಷ್ಟು ದಿನ ಹೋರಾಟ ನಡೆಸಿದೆ. ಇನ್ನು ನನಗೆ ಎದುರಿಸಲು ಶಕ್ತಿ ಇಲ್ಲ. ಕೇಸ್ ಹಿಂಪಡೆಯೋದಕ್ಕೂ ನಾನು ಸಿದ್ದ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ತನಿಖಾಧಿಕಾರಿ ಗುಣಪಾಲ್, ಸುಳ್ಳು ಹೇಳಿದ್ದರಿಂದ ಎದುರಿಸಬೇಕಾದ ಕಾನೂನಾತ್ಮಕ ಪರಿಣಾಮಗಳ ಬಗ್ಗೆ ಬಿಡಿಸಿ ಹೇಳಿದ್ದಾರೆ ಎಂದು ಹೇಳಲಾಗಿದೆ.
2003ರಲ್ಲಿ ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಣಿಪಾಲ್‌ನ ಕಸ್ತೂರಬಾ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅನನ್ಯ ಭಟ್ ಕಾಣೆಯಾಗಿದ್ದಾಳೆ ಎಂದು ಸುಜಾತ ಭಟ್ ಆರೋಪಿಸಿದ್ದರು.
ಜುಲೈ 15, 2025ರಂದು ಸುಜಾತ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ, ಆಗಸ್ಟ್ 19, 2025 ರಂದು ರಾಜ್ಯದ ಡಿಜಿಪಿ ಎಂ.ಎ. ಸಲೀಂ ಅವರ ಆದೇಶದಂತೆ ಈ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಲಾಯಿತು.
ತನಿಖಾಧಿಕಾರಿ ಗುಣಪಾಲ ಅವರ ನೇತೃತ್ವದಲ್ಲಿ ಇದೀಗ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ.
ಆಗಸ್ಟ್ 26 ಹಾಗೂ 27ರಂದು ಸುಜಾತ ಭಟ್ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿ, ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಈ ವೇಳೆ ತನಿಖಾಧಿಕಾರಿ ಗುಣಪಾಲ ಜೆ. ಅವರು ಸುಜಾತ ಭಟ್‌ರಿಂದ ಅನನ್ಯ ಭಟ್ ಅಸ್ತಿತ್ವಕ್ಕೆ ಸಂಬಂಧಿಸಿದ ದಾಖಲೆಗಳಾದ ಶಾಲಾ ದಾಖಲೆಗಳು, ಜನನ ಪ್ರಮಾಣಪತ್ರ, ಮತ್ತು ಕಾಲೇಜು ದಾಖಲಾತಿಗಳನ್ನು ಸಲ್ಲಿಸುವಂತೆ ಕೋರಿದ್ದರು