ಬೆಂಗಳೂರು : ನಗರದ ಕೆ.ಆರ್. ವೃತ್ತದ ಬಳಿ ಇರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಖಜಾನೆ ಇಲಾಖೆಯ ಆಯುಕ್ತರ ಕಚೇರಿ ಆವರಣದಲ್ಲಿ ‘ತಂಬಾಕು ಉತ್ಪನ್ನ ಸೇವನೆ ಆರೋಗ್ಯಕ್ಕೆ ಅಪಾಯಕರ’ ಎಂಬ ಸಂದೇಶಗಳೇನೋ ಕಾಣಿಸುತ್ತವೆ. ಆದರೆ, ಪ್ರವೇಶದ್ವಾರದ ಬಳಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಧೂಮಪಾನ ಎಗ್ಗಿಲ್ಲದೆ ರಾಜಾರೋಷವಾಗಿಯೇ ನಡೆಯುತ್ತಿದೆ.
ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯಿದೆ-2003ರ (ಕೋಟ್ಪಾ) ಪ್ರಕಾರ ಸಾರ್ವಜನಿಕ ಸ್ಥಳ ಹಾಗೂ ಕಚೇರಿಗಳಲ್ಲಿ ಧೂಮಪಾನ ಕಾನೂನು ಬಾಹಿರ.ಅದರಲ್ಲೂ ಶಿಕ್ಷಣ ಸಂಸ್ಥೆಗಳು, ಶಾಲಾ-ಕಾಲೇಜು ಸಮೀಪ ಇವುಗಳ ಮಾರಾಟ ಮತ್ತು ಸೇವನೆ ಸಂಪೂರ್ಣ ನಿಷಿದ್ಧ.
ಆದರೆ ಈ ಕಾಯಿದೆಗೆ ಅಪಚಾರ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಮುಂಭಾಗದಲ್ಲೇ ನಡೆಯುತ್ತಿದೆ.ಇನ್ನೂ ಈ ಕಚೇರಿ ಮುಂಭಾಗದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಕೂಡಾ ಇದೆ.ಆದರೆ ಕಾನೂನು ಪಾಲನೆ ಮಾಡುವವರು, ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳುವವರೂ ಯಾರೂ ಇಲ್ಲದಂತಾಗಿದೆ.
ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಪಡೆಯಬೇಕಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿದಲ್ಲಿ ದಂಡ ಹಾಕಿ, ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ರಾಜ್ಯದಾದ್ಯಂತ ಅರಿವು ಮೂಡಿಸುತ್ತಿದ್ದಾರೆ. ಆದರೆ, ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಆವರಣದಲ್ಲಿಯೇ ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನ ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡಿದ್ದಾರೆ.
ತಂಬಾಕು ಉತ್ಪನ್ನಗಳಿಂದ ಉಂಟಾಗುವ ಹಾನಿ ಕುರಿತು ಶಿಕ್ಷಣ ಇಲಾಖೆ ಕಚೇರಿಯ ಪ್ರವೇಶದ್ವಾರ ಹಾಗು ಕಟ್ಟಡದ ಮುಂಭಾಗದಲ್ಲಿ ಭಾರಿ ಗಾತ್ರದ ಮಾಹಿತಿ ಫಲಕ ಹಾಕಲಾಗಿದೆ. ‘ಆರೋಗ್ಯ ಆಯ್ದುಕೊಳ್ಳಿ ತಂಬಾಕನ್ನಲ್ಲ’, ‘ತಂಬಾಕು ನಿಮ್ಮ ಉಸಿರನ್ನು ಕಸಿಯಲು ಬಿಡಬೇಡಿ’ ಎಂಬ ಸಂದೇಶವನ್ನೂ ಅದರಲ್ಲಿ ಕಾಣಬಹುದಾಗಿದೆ.ಆದರೆ ಕಚೇರಿಯ ಆವರಣದಲ್ಲಿ ನಡೆಯುವುದೇ ಬೇರೆ.
ಕಚೇರಿ ಆವರಣದಲ್ಲಿರುವ ಕಾಫಿ-ಟೀ ಮಾರಾಟದ ಗೂಡಂಗಡಿಯಂತಿರುವ ಅಂಗಡಿಯಲ್ಲಿ ಸಿಗರೇಟ್ ಮಾರಾಟ ನಡೆಯುತ್ತಿದೆ.ಖರೀದಿಸಿದವರು ಅಲ್ಲೇ ಅದನ್ನು ಸೇವನೆ ಮಾಡುತ್ತಾರೆ ಪಕ್ಕದಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ಕೂಡಾ ಇದ್ದು ಬಸ್ ಗಾಗಿ ಕಾಯುವವರು ಸಿಗರೇಟ್ ಹೊಗೆಯ ಕಾಟ ಅನುಭವಿಸುವುದು ಅನಿವಾರ್ಯ.