ಬಜೆಟ್ ವಿಶ್ಲೇಷಣೆ – ಆರ್.ಎಚ್. ನಟರಾಜ್, ಹಿರಿಯ ಪತ್ರಕರ್ತ
ಸದ್ಯದಲ್ಲೇ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣು ನೆಟ್ಟಿರುವ ಮುಖ್ಯಮಂತ್ರಿ ಬೊಮ್ಮಾಯಿ. ಅಭಿವೃದ್ಧಿ ಯೋಜನೆಗಳಿಗಿಂತ ಭಾವನಾತ್ಮಕ ಅಂಶಗಳೇ ಮತಗಳಿಸಬಲ್ಲವು ಎಂಬ ವಿಶ್ವಾಸ. ಇದು ಹದಿನೈದನೆ ವಿಧಾನಸಭೆಯ ಕೊನೆಯ budget ನ ಎಲ್ಲ ಕಸರತ್ತುಗಳೂ ಈ ಎರಡು ಸಂಗತಿಗಳ ಮೇಲೆಯೇ ಕೇಂದ್ರೀಕರಿಸಿರುವುದು ಸ್ಪಷ್ಟವಾಗಿದೆ.
ಬೆಂಗಳೂರಿನಲ್ಲಿ ತಾಯಿ ಭುವನೇಶ್ವರಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಸ್ಥಾಪನೆ, ರಾಮನಗರದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿಯ ರಾಮಮಂದಿರ ನಿರ್ಮಾಣ, ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂಪಾಯಿ, ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ ಎಂಬ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಹಬ್ಬ, ಮಠ ಮಂದಿರಗಳ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 475 ಕೋಟಿ ಇಂತಹ ಹಲವು ಭಾವನಾತ್ಮಕ ಯೋಜನೆಗಳ ಮೂಲಕ ಮತ ಬುಟ್ಟಿಗೆ ಕೈ ಹಾಕಿದ್ದಾರೆ.
ರಾಯಿಸ್ಟ್ ಸಿದ್ಧಾಂತದ ತಂದೆಯ ಛಾಪು, ಜೆ.ಪಿ.- ಲೋಹಿಯಾ ಸಿದ್ಧಾಂತದ ಅಧ್ಯಯನ
ಸಮಾಜವಾದಿಗಳ ಒಡನಾಟದ ಹಣಕಾಸು ಮಂತ್ರಿಯಾದ ಬಸವರಾಜ ಬೊಮ್ಮಾಯಿ (Basavaraj Bommai) ಮುಖ್ಯಮಂತ್ರಿಯಾಗಿ BJP ಮತ್ತು ಸಂಘ ಪರಿವಾರದ ಕಾರ್ಯಸೂಚಿಗೆ ಅನುಗುಣವಾಗಿ ಬಜೆಟ್ ಮಂಡಿಸಲು ಪ್ರಯತ್ನಿಸಿ ಅತ್ತ ಸಮಾಜವಾದವೂ ಅಲ್ಲ,ಇತ್ತ ಪರಿವಾರ ಸಿದ್ಧಾಂತವೂ ಅಲ್ಲದ ಯಾಥಾಸ್ಥಿತಿಯ ವಾರ್ಷಿಕ ಪರಂಪರೆ ಪೂರ್ಣಗೊಳಿಸಿದ್ದಾರೆ.
ಈ ಬಜೆಟ್ ನ ಅವಧಿ ಕೇವಲ ಮೂರು ತಿಂಗಳು ಮಾತ್ರ, ನಂತರ ಯಾವುದೇ ಸರ್ಕಾರ ಬರಲಿ ತನ್ನ ಕಾರ್ಯಸೂಚಿಯ ವಾರ್ಷಿಕ ಬಜೆಟ್ ಮಂಡಿಸುವುದು ವಾಡಿಕೆ. ಈ ಸತ್ಯದ ಅರಿವಿದ್ದೇ ಮುಖ್ಯಮಂತ್ರಿ ಬೊಮ್ಮಾಯಿ ಭರಪೂರ ಘೋಷಣೆಗಳು, ಪರಿವಾರ ಯಥೇಚ್ಛವಾಗಿ ಬಳಸುವ ಸಂಸ್ಕೃತ ಮೂಲದ ಹಿಂದಿ ಶಬ್ದಗಳ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಆರಂಭದಲ್ಲೇ ಮನುಜಮತ ಸಿದ್ಧಾಂತವನ್ನು ಪ್ರತಿಪಾದಿಸಿದ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲು, ‘ಹೋಗುತಿದೆ ಹಳೆ ಕಾಲ, ಹೊಸ ಕಾಲ ಬರುತಲಿದೆ. ಬರುತಲಿದೆ ಹೊಸ ದೃಷ್ಟಿ, ಹಳೆಯ ಬಾಳು ಹೋಗುತಲಿದೆ, ಹೊಸ ಬಾಳು ಬರುತಿದೆ’ ಎಂದು ಉಲ್ಲೇಖಿಸಿದ್ದು, ಜೊತೆಗೆ ಪ್ರಕಟಿಸಿದ ಕಾರ್ಯಕ್ರಮ ನೋಡಿದಾಗ ಯಾವ ಕಾಲ ಬರಲಿದೆ ಎಂದು ಕೇಳಬೇಕಾಗುತ್ತದೆ.
ವಿಧಾನಸಭೆ ಚುನಾವಣೆಗೂ ಮುನ್ನ ಮಂಡಿತವಾದ ಬಜೆಟ್ ಇದಾಗಿದೆ. ಹೀಗಾಗಿ ಹಣಕಾಸು ಸಚಿವರಿಗೆ ಬಜೆಟ್ ಮಂಡಿಸುವಾಗ ವೋಟಿನ ಮೇಲೇ ಕಣ್ಣಿಟ್ಟಿದ್ದಾರೆ.
ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್‍ಗೆ ಹೆಚ್ಚಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗುರಿಗೆ ಪೂರಕವಾಗಿ ರಾಜ್ಯದ ಅರ್ಥಿಕತೆಯನ್ನು ಒಂದು ಟ್ರಿಲಿಯನ್‍ಗೆ ಹೆಚ್ಚಿಸುವ ಇಂಗಿತವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತ ಪಡಿಸಿದ್ದರು. ಅದಕ್ಕೆ ಅನುಗುಣವಾಗಿ ಬಜೆಟ್ ಗಾತ್ರವನ್ನು ಹೆಚ್ಚಿಸಲಾಗಿದ್ದು, ಒಟ್ಟು ಗಾತ್ರವನ್ನು 3,09,182 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
2023-24ನೇ ಆರ್ಥಿಕ ವರ್ಷದಲ್ಲಿ ಸ್ವಂತ ತೆರಿಗೆ ರಾಜಸ್ವ ಸಂಗ್ರಹ 1,64,653 ಕೋಟಿ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 11 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆಗಳಿವೆ. ಕೇಂದ್ರದ ತೆರಿಗೆಯ ಪಾಲಿನಿಂದ 37,252 ಕೋಟಿ ರೂಪಾಯಿ, ಸಹಾಯಧನ ರೂಪದಲ್ಲಿ 13,005 ಕೋಟಿ ರೂಪಾಯಿ ನೀರಿಕ್ಷಿಸಲಾಗಿದೆ. ಹೀಗಿದ್ದರೂ
ಈ ವರ್ಷವೂ 77,750 ಕೋಟಿ ರೂಪಾಯಿ ಸಾಲ ಪಡೆಯುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. ಋಣೇತರ ಸ್ವೀಕೃತಿಗಳಿಂದ 23 ಸಾವಿರ ಕೋಟಿ, ಸಾಲಗಳ ವಸೂಲು ಮೊತ್ತದಿಂದ 228 ಕೋಟಿ ರೂಪಾಯಿಗಳಗಳನ್ನು ಅಂದಾಜಿಸಲಾಗಿದೆ. ಒಟ್ಟು 3,03,910 ಕೋಟಿ ರೂಪಾಯಿಗಳ ಜಮೆಯನ್ನು ಅಂದಾಜಿಸಲಾಗಿದೆ.
ಇನ್ನೂ ವೆಚ್ಚದ ಬಾಬ್ತುನಲ್ಲಿ 2,25,507 ಕೋಟಿ ರೂಪಾಯಿಗಳ ರಾಜಸ್ವ ವೆಚ್ಚ, 61,234 ಕೋಟಿ ರೂಪಾಯಿ ಬಂಡವಾಳ ವೆಚ್ಚವನ್ನು ಅಂದಾಜಿಸಲಾಗಿದೆ. ಸಾಲ ಮರುಪಾವತಿಗೆ 22,441 ಕೋಟಿ ರೂಪಾಯಿಗಳನ್ನು ಒಳಗೊಂಡು ಒಟ್ಟು ವೆಚ್ಚ 3,09,182 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ GST ಪೂರ್ವ ತೆರಿಗೆ ವಿವಾದ ತ್ವರಿತ ಇತ್ಯರ್ಥಕ್ಕೆ ಕರಸಮಾಧಾನ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ 2023-24 ನೇ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಕರಸಮಾಧಾನ ಯೋಜನೆಯ ಮೂಲಕ ತೆರಿಗೆ ಬಾಕಿಗಳನ್ನು ಯಾವುದೇ ದಾವೆಯಿಲ್ಲದೇ ಕ್ಷಿಪ್ರವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ ಹಾಗೂ ಈ ಯೋಜನೆಯಡಿ ಎಲ್ಲಾ GST-ಪೂರ್ವ ಅಧಿನಿಯಮಗಳ ಅಡಿಯಲ್ಲಿ ಬಾಕಿ ಇರುವ ಪೂರ್ಣ ತೆರಿಗೆಯನ್ನು 2023 ರ ಅ.30 ರ ಒಳಗೆ ಪಾವತಿಸುವವರಿಗೆ ಬಡ್ಡಿ ಮತ್ತು ದಂಡಬಡ್ಡಿ ಪಾವತಿಯಲ್ಲಿ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಇದೊಂದು ಉತ್ತಮ ಪ್ರಯತ್ನವಾಗಿದೆ.
ಆಡಳಿತದಲ್ಲಿ, ಕೈಗಾರಿಕೋದ್ಯಮಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ವ್ಯಾಪಕ ಬಳಕೆಗಾಗಿ ಹಾಗೂ ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದ್ದಾರೆ. ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ಉತ್ತಮ ನಿರ್ಧಾರವಾಗಿದೆ. ಬದಲಾದ ಆರ್ಥಿಕ ಪರಿಸ್ಥಿತಿ ಹಾಗೂ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬಹುತೇಕ ವಲಯಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ.ಕೇಂದ್ರ ಸರ್ಕಾರದ ಈ ನಿಲುವು ಪ್ರಾದೇಶಿಕ ಭಾಷೆಗಳಿಗೆ ದೊಡ್ಡ ಹೊಡೆತ ನೀಡಿದೆ. ಇದಕ್ಕೆ ಮದ್ದು ನೀಡುವ ರೀತಿಯಲ್ಲಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮ ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಇದು ಆದಷ್ಟು ಜರೂರಾಗಿ ಜಾರಿಗೆ ಬರಬೇಕಿದೆ.
ಕೃಷಿ ಆಧಾರಿತ ಗ್ರಾಮೀಣ ಆರ್ಥಿಕತೆಗೆ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಿದರೂ ಒಟ್ಟಾರೆ ಅನುದಾನದ ಪ್ರಮಾಣ ಕಡಿಮೆಯಾಗಿದೆ. ಶೂನ್ಯ ಬಡ್ಡಿ ಸಾಲದ ಪ್ರಮಾಣ ಮೂರರಿಂದ ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಿದರೂ, ಸಾಲ ನೀಡುವ ಸಹಕಾರ ಬ್ಯಾಂಕ್ ಗಳ ಅನುದಾನದ ಪ್ರಮಾಣ ಹೆಚ್ಚಳವಾಗಿಲ್ಲ. ಇದರ ನಡುವೆ ಕೆಲವು ಹಾಲಿ ಯೋಜನೆಗಳಿಗೆ ಅನುದಾನ ಕಡಿತ ಮಾಡಿರುವುದು ಗಮನಾರ್ಹ.
ಕೃಷಿಗೆ ‘ಬಲ’ ನೀಡುವಂತಹ ಯೋಜನೆಗಳು, ತಂತ್ರಜ್ಞಾನ ಬಳಕೆಗೆ ಉತ್ತೇಜನ, ನೈಸರ್ಗಿಕ ಕೃಷಿಗೆ ಬೆಂಬಲ, ಬೀಜ–ರಸಗೊಬ್ಬರ ಪೂರೈಕೆಯ ಸರಪಳಿ ಬಲವರ್ಧನೆ,ಉದ್ಯೋಗ ಸೃಷ್ಟಿಗೆ ಘೋಷಿಸಿರುವ ಕೆಲವು ಯೋಜನೆಗಳು ಸ್ವಾಗತಾರ್ಹವಾದರೂ ಬಹುತೇಕ ಯೋಜನೆಗಳು ಆರ್ಥಿಕ ನೆರವಿಗೆ ಸೀಮಿತವಾಗಿವೆ.
ರಾಜ್ಯದ ಎಲ್ಲ ಮಹಿಳಾ ಕಾರ್ಮಿಕರಿಗೆ ತಲಾ 500 ರೂ. ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಮತ್ತೊಂದೆಡೆ ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಹೇಳಿದ್ದಾರೆ.
ಯುವಸ್ನೇಹಿ, ಗೃಹಿಣಿ ಶಕ್ತಿ, ಮೊದಲಾದ ಯೋಜನೆಗಳ ಮೂಲಕ ಖಜಾನೆಯ ಹಣವನ್ನು ನೇರವಾಗಿ ಎತ್ತಿ ಫಲಾನುಭವಿಗಳಿಗೆ ಕೊಡಲಾಗುತ್ತದೆ. ಇದಕ್ಕಾಗಿ ಫಲಾನುಭವಿಗಳು ಏನೂ ಮಾಡಬೇಕಿಲ್ಲ ತಮ್ಮ ಹೆಸರು, ವಿವರ ಸಂಬಂಧಿಸಿದ ಇಲಾಖೆಯಲ್ಲಿ ನೊಂದಾಯಿಸಿದರೆ ಸಾಕು. ಈ ಎಲ್ಲವೂ ಮತಗಳ ಮೇಲೆ ಕಣ್ಣಿಟ್ಟಿರುವ ಕಾರ್ಯಕ್ರಮಗಳೇ ಹೊರತು ಅಭಿವೃದ್ಧಿಯ ದೃಷ್ಟಿಯಿಂದ ರೂಪಿತವಾದವುಗಳಲ್ಲ.
ಹಲವಾರು ಹೊಸ ಘೋಷಣೆಗಳು ಈ ಬಜೆಟ್ ನಲ್ಲಿ ಗಮನ ಸೆಳೆಯುತ್ತವೆ. ಬರೀ ಘೋಷಣೆಗಳು ಕ್ಷಣಿಕ ಹಿತಾನುಭವ ನೀಡಬಹುದೇ ವಿನಾ ಅವುಗಳಿಂದ ಹೆಚ್ಚೇನೂ ಪ್ರಯೋಜನವಿಲ್ಲ. ಬಜೆಟ್‌ನ ಘೋಷಣೆಗಳೆಲ್ಲ ಅನುಷ್ಠಾನಕ್ಕೆ ಬಂದರಷ್ಟೇ ಅವುಗಳಿಗೆ ಕಿಮ್ಮತ್ತು. ಆ ದಿಕ್ಕಿನಲ್ಲಿ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು ಆದರೆ, ಚುನಾವಣಾ ಕಾಲದ ಬಜೆಟ್ ಅನುಷ್ಠಾನಕ್ಕೆ ಬದ್ಧತೆ ತೋರಿಸಬೇಕಾದವರು ಯಾರು ಎಂಬುದೇ ಮೂಲ ಪ್ರಶ್ನೆ.