ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಪದಚ್ಯುತ ಗೊಳಿಸುವ ಜೊತೆಗೆ ಈ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕ ಮಕ್ಕಳಿಗೆ ನೀಡದಂತೆ ಆಗ್ರಹಿಸಿ ಕುವೆಂಪು ಜನ್ಮ ಸ್ಥಳದಿಂದ ಪಾದಯಾತ್ರೆ ನಡೆಸಲು ಶಿವಮೊಗ್ಗ ಕಾಂಗ್ರೆಸ್ ತೀರ್ಮಾನಿಸಿದೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಾಮಾಜಿಕ ಜಾಲತಾಣದಲ್ಲಿ ನಾಡಿನ ಹೆಮ್ಮೆಯ ಕವಿ ಕುವೆಂಪುರವರು ರಚಿಸಿರುವ ಕನ್ನಡ ನಾಡ ಗೀತೆಯನ್ನು ಅವಮಾನಿಸಿರುವುದು, ನಾಡಧ್ವಜಕ್ಕೆ ಅಪಹಾಸ್ಯ ಮಾಡಿರುವುದು ಅಕ್ಷಮ್ಯ ಎಂದು ಹೇಳಿದರು.
ರೋಹಿತ್ ಸಮಿತಿ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಕುರಿತ ಪಾಠ ತಿರುಚಿದೆ, ಬುದ್ದರ ಪದ್ಯ ಕಿತ್ತು ಹಾಕಿದೆ, ಬಸವಣ್ಣ ವಚನಗಳಿಗೆ, ಜೀವನಗಾಥೆಗೆ ತಿದ್ದುಪಡಿ ಮಾಡಿದೆ. ನಾರಾಯಣ ಗುರುಗಳ ಪಾಠ ತೆಗದು ಮತ್ತೊಂದು ಕಡೆ ತಿರುಚಿ ಸೇರಿಸಿದೆ.
ಸಾ ರಾ ಅಬೂಬಕರ ಅವರ ಮಾನವೀಯ ನೆಲೆಯ ಕತೆ ತೆಗೆದಿದೆ. ಇತಿಹಾಸಕ್ಕೆ ಕೋಮು ದ್ವೇಷದ ಲೇಪ ಹಚ್ಚಿದೆ. ಬಿ ಟಿ ಲಲಿತಾ ನಾಯಕ್ ಅವರ ಪದ್ಯ ಕಿತ್ತು ಹಾಕಿದೆ. ಕೋಮುವಾದ ಎಂದರೆ ಮುಸ್ಲಿಂ ಕೋಮುವಾದ ಎಂದು ಬಿಂಬಿಸಿದೆ. ಪ್ರಾದೇಶಿಕವಾದ ಅಂದರೆ ದೇಶದ್ರೋಹ ಎಂದು ಬಿಂಬಿಸಿದೆ.
ಮಹಿಳೆಯರನ್ನು ಕೀಳಾಗಿ ಬಿಂಬಿಸುವ ಪಠ್ಯ ಹಾಕಿದೆ.
ಇಂತಹ ಹತ್ತು ಹಲವು ವಿಕೃತಿಗಳು ಒಂದೊಂದಾಗಿ ಬಯಲಾಗುತ್ತಿವೆ ಎಂದು ಹೇಳಿದರು.
ಇಂಥಹ ಎಲ್ಲಾ ವಿಚಾರಗಳನ್ನು ವಿರೋಧಿಸಿ ತತಕ್ಷಣದಲ್ಲಿ ಚಕ್ರತೀರ್ಥ ಸಮಿತಿಯನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ತಹಷಿಲ್ದಾರ್ ರವರಿಗೆ ಮನವಿ ಸಲ್ಲಿಸಲಾಗುವುದು. ಹದಿನೈದು ದಿನಗಳಲ್ಲಿ ಕಿತ್ತು ಹಾಕಿ ಸಮಿತಿಯನ್ನು ರದ್ದುಗೊಳಿಸದೆ ಹೋದರೆ ಕುವೆಂಪುರವರ ಜನ್ಮ ಸ್ಥಳದಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.