ಬೆಂಗಳೂರು,ಮೇ.27-ಕೊತ್ತನೂರಿನ ದೊಡ್ಡಗುಬ್ಬಿ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟ ಮೂವರು ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಅಗ್ನಿಶಾಮಕ ಸಿಬ್ಬಂದಿಯು ಎನ್ ಡಿ ಆರ್ ಎಫ್ ನೆರವಿನೊಂದಿಗೆ ಕಾರ್ಯಾಚರಣೆ ಕೈಗೊಂಡಾಗ ಮೊದಲಿಗೆ ಬಾಲಕ ಸಾಹಿಲ್ ಶವ ಪತ್ತೆಯಾಗಿದ್ದು ನಂತರ ಇಮ್ರಾನ್ ಹಾಗು ಮುಭಾರಕ್ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.
ಮೃತರಲ್ಲಿ ಸರಾಯಿಪಾಳ್ಯದ ಫಾತಿಮಾ ಲೇಔಟ್ ನ ಇಮ್ರಾನ್ ಪಾಷ (17) ಎಲಿಮೆಂಟ್ಸ್ ಮಾಲ್ ಪಿವಿಆರ್ ನಲ್ಲಿ ಹೆಲ್ಪರ್ ಕೆಲಸ ಮಾಡುತಿದ್ದರೆ, ಮುಬಾರಕ್ (17) ಫಾತೀಮಾ ಲೇಔಟ್ ನ ಅಬೂಬ್ ಕರ್ ಮಸೀದಿ ರಸ್ತೆ ಬಳಿ ವಾಸವಾಗಿದ್ದು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಸಾಹಿಲ್ (15) ಫಾತೀಮಾ ಲೇಔಟ್ ನಲ್ಲಿ ವಾಸವಾಗಿದ್ದ. ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮೃತ ಇಮ್ರಾನ್ ವಾರದ ಹಿಂದೆ ಇದೇ ಕೆರೆಯಲ್ಲಿ ಈಜಲು ಬಂದು ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದನ್ನು ನೋಡಿ ಮೃತ ಮೂವರು ಸೇರಿ ಐವರು ನಿನ್ನೆ ಮಧ್ಯಾಹ್ನ 2 ರ ವೇಳೆ ಕೆರೆಗೆ ಈಜಲು ಬಂದಿದ್ದರು ಎಂದು ತಿಳಿದುಬಂದಿದೆ.
ಮೃತರ ಜೊತೆಗೆ ಈಜಲು ಹೋಗಿ ಬದುಕುಳಿದ ಇನ್ನಿಬ್ಬರಾದ ಅಬ್ದುಲ್ ರೆಹಮಾನ್ ಹಾಗು ಶಾಹೀಲ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಬಾರಕ್, ಶಾಹೀದ್ಗೆ ಈಜು ಬರದಿದ್ದರೂ ಇಮ್ರಾನ್ ಬಲವಂತವಾಗಿ ನೀರಿಗಿಳಿಯುವಂತೆ ಮಾಡಿದ್ದ. ನಂತರ ಈಜಾಡಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿದ್ದಾರೆ.
ದಡದಲ್ಲಿದ್ದ ಇಬ್ಬರು ಶಾಹೀಲ್ ಹಾಗು ಅಬ್ದುಲ್ ಪೋಷಕರಿಗೆ ಹಾಗು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗು ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಮುಳುಗಿ ಕಾಣೆಯಾದವರ ಪತ್ತೆಗಾಗಿ ನಿನ್ನೆ ರಾತ್ರಿಯವರೆಗೆ ಶೋಧ ನಡೆಸುತ್ತಿದ್ದರೂ ಶವಗಳು ಪತ್ತೆಯಾಗಿರಲಿಲ್ಲ. ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿ ಇಂದು ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರೆಸಿ ಇನ್ನಿಬ್ಬರು ಶವಗಳನ್ನು ಮೇಲೆತ್ತಲಾಗಿದೆ.