ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿರುವ ತಾಲಿಬಾನ್ ಆಡಳಿತವು, ಇದೀಗ ಮತ್ತೊಂದು ಆಘಾತಕಾರಿ ಆದೇಶವನ್ನು ಹೊರಡಿಸಿದೆ. ಹೊಸದಾಗಿ ಜಾರಿಗೆ ತಂದಿರುವ ದಂಡ ಸಂಹಿತೆಯ ಪ್ರಕಾರ, ಪತ್ನಿಯರ ಮೇಲೆ ದೈಹಿಕ ಹಲ್ಲೆ ನಡೆಸಲು ಪತಿಯಂದಿರಿಗೆ ಕಾನೂನುಬದ್ಧವಾಗಿ ಅನುಮತಿ ನೀಡುವ ಮೂಲಕ ಕೌಟುಂಬಿಕ ದೌರ್ಜನ್ಯಕ್ಕೆ ಅಧಿಕೃತ ಮುದ್ರೆ ಒತ್ತಲಾಗಿದೆ.
ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಈ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಮಹಿಳೆಯರ ಜೀವನವನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಈ ಕಾನೂನಿನ ಪ್ರಕಾರ ಪತಿಯು ತನ್ನ ಪತ್ನಿಯನ್ನು ಹೊಡೆಯಬಹುದು, ಆದರೆ ಆ ಹಲ್ಲೆಯಿಂದ ಮೂಳೆ ಮುರಿಯಬಾರದು ಅಥವಾ ದೇಹದ ಮೇಲೆ ತೀವ್ರವಾದ ಗಾಯದ ಗುರುತುಗಳು ಕಾಣಿಸಿಕೊಳ್ಳಬಾರದು ಎಂಬ ವಿಚಿತ್ರ ಷರತ್ತನ್ನು ವಿಧಿಸಲಾಗಿದೆ. ಒಂದು ವೇಳೆ ಪತಿಯು ಅತಿಯಾಗಿ ಹೊಡೆದು ಮೂಳೆ ಮುರಿದರೆ ಅಥವಾ ರಕ್ತ ಬರುವಂತೆ ಗಾಯಗೊಳಿಸಿದರೆ ಮಾತ್ರ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿಯೂ ಪತಿಗೆ ಗರಿಷ್ಠ ಕೇವಲ 15 ದಿನಗಳ ಜೈಲು ಶಿಕ್ಷೆ ಮಾತ್ರ ವಿಧಿಸಲು ಅವಕಾಶವಿದೆ.
ಈ ವ್ಯವಸ್ಥೆಯಲ್ಲಿ ಹಲ್ಲೆಗೊಳಗಾದ ಮಹಿಳೆಯೇ ನ್ಯಾಯಾಧೀಶರ ಮುಂದೆ ತನ್ನ ಮೇಲಿನ ದೌರ್ಜನ್ಯವನ್ನು ಸಾಬೀತುಪಡಿಸಬೇಕಾಗುತ್ತದೆ. ಅಫ್ಘಾನಿಸ್ತಾನದ ಈಗಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಪುರುಷನ ಸಾಕ್ಷ್ಯಕ್ಕೆ ಹೆಚ್ಚಿನ ಬೆಲೆ ಇರುವುದರಿಂದ ಮಹಿಳೆಯರಿಗೆ ನ್ಯಾಯ ಸಿಗುವುದು ಬಹುತೇಕ ಅಸಾಧ್ಯವಾಗಿದೆ. ಅಲ್ಲದೆ ಈ ನಿಯಮಾವಳಿಯು ಮಕ್ಕಳ ಮೇಲಿನ ಶಿಸ್ತು ಕ್ರಮದ ಹೆಸರಿನಲ್ಲಿ ಪೋಷಕರಿಗೆ ದೈಹಿಕ ದಂಡನೆ ನೀಡಲು ಕೂಡ ಮುಕ್ತ ಅವಕಾಶ ನೀಡಿದೆ.
ತಾಲಿಬಾನ್‌ನ ಈ ಕ್ರಮವನ್ನು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ವಿಶ್ವಸಂಸ್ಥೆ ತೀವ್ರವಾಗಿ ಖಂಡಿಸಿವೆ. “ಅಫ್ಘಾನಿಸ್ತಾನವು ಮಾನವ ಹಕ್ಕುಗಳ ಸ್ಮಶಾನವಾಗುತ್ತಿದೆ” ಎಂದು ವಿಶ್ವಸಂಸ್ಥೆಯ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಆತಂಕ ವ್ಯಕ್ತಪಡಿಸಿದ್ದಾರೆ. 2021ರಲ್ಲಿ ಅಧಿಕಾರ ಹಿಡಿದ ನಂತರ ಈಗಾಗಲೇ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗದ ಮೇಲೆ ನಿರ್ಬಂಧ ಹೇರಿರುವ ತಾಲಿಬಾನ್, ಈಗ ಮನೆಯ ನಾಲ್ಕು ಗೋಡೆಗಳ ನಡುವೆಯೂ ಅವರ ಸುರಕ್ಷತೆಯನ್ನು ಕಿತ್ತುಕೊಂಡಿದೆ.


1 Comment
online pharmacy viagra prescription kamagra oral jelly online pharmacy health express pharmacy+artane castle