ಬೆಂಗಳೂರು, ಜ.26-
‘ರಾಜ್ಯದ ಸರ್ವರಿಗೂ ತಮ್ಮ ಮನೆಯ ಮುಂದೆ ಸುಲಭವಾಗಿ ಅತ್ಯುನ್ನುತ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕೆನ್ನುವುದು ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಗಳುಳ್ಳ ಮಾದರಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು’ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ. 74ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನಾರೋಗ್ಯ, ಆರೋಗ್ಯ ಕರ್ನಾಟಕ ಕಾರ್ಡ್‍ಗಳಿಗೆ 1.22 ಕೋಟಿ ಫಲಾನುಭವಿಗಳನ್ನು ನೊಂದಾಯಿಸಿದ್ದು, BPL ಕುಟುಂಬಗಳಿಗೆ 5 ಲಕ್ಷ ರೂ.ವರೆಗಿನ ಉಚಿತ ವೈದ್ಯಕೀಯ ರಕ್ಷಣೆ ಒದಗಿಸುತ್ತದೆ’ ಎಂದರು.
‘ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು 83ರಿಂದ 69ಕ್ಕೆ ಇಳಿದಿದೆ. ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್‍ಗಳನ್ನು, 128 ಮಹಿಳಾ ಸ್ವಾಸ್ಥ್ಯ ಚಿಕಿತ್ಸಾಲಯಗಳನ್ನು ಮತ್ತು ಪಾಲಿ ಕ್ಲಿನಿಕ್‍ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅವರು ತಿಳಿಸಿದರು.
ಕರ್ನಾಟಕ ದೇಶದ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಜನತೆಗೆ ಮೂಲಭೂತ ಸೌಕರ್ಯ, ಸೇವೆ, ಸರ್ವರ ಅಭಿವೃದ್ಧಿಯನ್ನು ಒಳಗೊಂಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಗಣ್ಯ ಸ್ಥಾನದಲ್ಲಿದೆ’ ಎಂದರು.
‘ನವ ಭಾರತಕ್ಕಾಗಿ ನವ ಕರ್ನಾಟಕ ಎಂಬ ಆಶಯದೊಂದಿಗೆ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಮೂಲ ಸೌಕರ್ಯಗಳ ಉನ್ನತೀಕರಣ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಹದಿನಾಲ್ಕು ಅಮೃತ ಮಹೋತ್ಸವ ಯೋಜನೆಗಳು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿವೆ’ ಎಂದು ಹೇಳಿದರು. ‘ರಾಜ್ಯಾದ್ಯಂತ ಇರುವ ಸಣ್ಣ, ಅತಿ ಸಣ್ಣ , ಮಧ್ಯಮ ಹಾಗೂ ದೊಡ್ಡ ಹಿಡುವಳಿದಾರರನ್ನು ಗುರುತಿಸಲು ಕಳೆದ ಅಕ್ಟೋಬರ್‌ನಿಂದ ಕೃಷಿ ಗಣತಿ ಕಾರ್ಯವೂ ಆರಂಭವಾಗಿದೆ’ ಎಂದರು.
‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತ್ರಿ ಯೋಜನೆಯಡಿ ಸುಮಾರು 6 ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಮೊತ್ತವನ್ನು ವೆಚ್ಚ ಮಾಡಲಾಗಿದೆ. ಕಳೆದ ಜನವರಿಯಿಂದ ಡಿಸೆಂಬರ್ ತಿಂಗಳವರೆಗೆ ಒಟ್ಟು 13.47 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಿ 29.02 ಲಕ್ಷ ಕುಟುಂಬಗಳ 52.71 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಒಟ್ಟು 4110 ಕೋಟಿ ರೂ.ಗಳ ಕೂಲಿ ಮೊತ್ತವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಜಮಾ ಮಾಡಲಾಗಿದೆ’ ಎಂದರು.
‘ಬಾಲ್ಯವಿವಾಹ ತಡೆಗಟ್ಟುವ ಸ್ಫೂರ್ತಿ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ವಿಜಯಪುರ, ರಾಯಚೂರು, ಬೆಳಗಾವಿ, ಕಲ್ಬುರ್ಗಿ ಜಿಲ್ಲೆಗಳ 11 ತಾಲ್ಲೂಕುಗಳಲ್ಲಿ ಈ ಯೋಜನೆ ವಿಸ್ತರಿಸಲಾಗುತ್ತಿದೆ. 12.51 ಕೋಟಿ ರೂ. ವೆಚ್ಚ ಮಾಡಲಾಗುವುದು’ ಎಂದರು. ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಚಾಮರಾಜನಗರ, ಕೊಡಗು, ಬೀದರ್, ಹಾವೇರಿ, ಕೊಪ್ಪಳ, ಬಾಗಲಕೋಟೆ, ಹಾಸನ ಸೇರಿದಂತೆ ಏಳು ಸ್ವಾಯತ್ತ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದೇವೆ. IIT ಮಾದರಿಯಲ್ಲಿ 7 ಎಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ’ಎಂದು ಅವರು ತಿಳಿಸಿದರು.