ಬೆಂಗಳೂರು, ಅ.14-
ಶ್ರೇಷ್ಠತೆಯ ವ್ಯಸನದಿಂದ ನರಳುತ್ತಿರುವ ಹಿಂದೂ ಧರ್ಮ ಸುಧಾರಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ತಾವು ಹಿಂದೂ ಧರ್ಮ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಹಿಂದೂ ಧರ್ಮ ಸುಧಾರಣೆಯಾಗಬಹುದು ಎಂದು ನಾನು ಇಲ್ಲಿಯವರೆಗೆ ಕಾಯುತ್ತಿದ್ದೆ ಆದರೆ ಈ ಧರ್ಮ ಶ್ರೇಷ್ಠತೆಯ ವ್ಯಸನದಿಂದ ನರಳುತ್ತಿದ್ದು ಸುಧಾರಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಧಮ್ಮ ಚಕ್ರ ಪರಿವರ್ತನಾ ದಿನದ ಹಿನ್ನೆಲೆಯಲ್ಲಿ ಶುಭ ಕೋರಿರುವ ಸಚಿವ ಮಹದೇವಪ್ಪ, ಹಿಂದು ಧರ್ಮ ಜಾತಿ ಶ್ರೇಷ್ಠತೆಯ ರೋಗದಿಂದ ಬಳಲುತ್ತಿದೆ.ಹೀಗಾಗಿ ಹಿಂದು ದರ್ಮ ಸುಧಾರಣೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ
ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ ಇದು ಬೌದ್ಧ ಧರ್ಮದಲ್ಲಿ ಹಾಸು ಹೊಕ್ಕಾಗಿದೆ ಎಂದಿದ್ದಾರೆ.
ವ್ಯಕ್ತಿಯ ಬೆಳವಣಿಗೆಗೆ, ಕರುಣೆ, ಸಮಾನತೆ ಮತ್ತು ಸ್ವಾತಂತ್ರ್ಯ ಅತ್ಯಂತ ಮುಖ್ಯ. ಆದರೆ ನನ್ನ ಅನುಭವದಲ್ಲಿ ಜಾತಿ ಶ್ರೇಷ್ಠತೆ ರೋಗದಿಂದ ಬಳಲುತ್ತಿರುವ ಹಿಂದು ಧರ್ಮ ಸುಧಾರಣೆ ಆಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ನಾನು ಸಮಾನತೆ ಮತ್ತು ಶಾಂತಿಯ ರೂಪಕವಾದ ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ. ಹಾಗೂ ಮುಂದೆ ಎಲ್ಲರೂ ಭಾರತದ ಮೂಲ ಧರ್ಮವಾಗಿದ್ದ ಬೌದ್ಧ ಧರ್ಮದ ಪ್ರಚಾರ ಮಾಡಬೇಕು ಎಂದು ಬಯಸುತ್ತೇನೆ ಎಂದು ಮನವಿ ಮಾಡಿದ್ದಾರೆ.