ಬೆಂಗಳೂರು: ಇಂಧನ ಮಂತ್ರಿ ಕೆ.ಜೆ.ಜಾರ್ಜ್ ಅವರ ವಿಶೇಷ ಆಸಕ್ತಿ ಹಾಗೂ ಇಲಾಖೆಯ ಸಮರ್ಪಕ ನಿರ್ವಹಣೆಯ ಪರಿಣಾಮವಾಗಿ ವಿದ್ಯುತ್ ವಿತರಣಾ ಸಂಸ್ಥೆಗಳು ನಷ್ಟದ ಸುಳಿಯಿಂದ ಹೊರಬಂದು ಲಾಭದಾಯಕ ಸಂಸ್ಥೆಗಳಾಗುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿವೆ.
ವಿತರಣಾ ಸಂಸ್ಥೆಗಳು ಲಾಭದಾಯಕ ಮಾತ್ರವಲ್ಲದೆ ಗ್ರಾಹಕರಿಗೆ ಗುಣಮಟ್ಟದ ಸೌಲಭ್ಯಗಳನ್ನು ಕೂಡ ಒದಗಿಸುತ್ತಿವೆ.
ಕಾಂಗ್ರೆಸ್ ಪಕ್ಷ ವಿಧಾನಸಭೆ Election ಸಮಯದಲ್ಲಿ ನೀಡಿದ ಭರವಸೆಗಳಲ್ಲಿ ಗೃಹ ಜ್ಯೋತಿ (Gruha Jyothi Scheme) ಯೋಜನೆ ಅತ್ಯಂತ ಪ್ರಮುಖವಾದ ಯೋಜನೆಯಾಗಿದೆ.ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಜಾರಿಗೊಂಡ ಮಹತ್ವದ ಯೋಜನೆ ಇದಾಗಿದೆ.
ಈ ಯೋಜನೆ ಮೂಲಕ ರಾಜ್ಯದ ಎಲ್ಲಾ ಗೃಹ ಬಳಕೆ ವಿದ್ಯುತ್ ಗ್ರಾಹಕರು ಮಾಸಿಕ ಸರಾಸರಿ ಇನ್ನೂರು ಯೂನಿಟ್ ಉಚಿತ ವಿದ್ಯುತ್ ಪಡೆಯುವ ಈ ಯೋಜನೆ ರಾಜ್ಯ ಸರ್ಕಾರದ ಜನಪ್ರಿಯತೆಯನ್ನು ಹೆಚ್ಚಿಸಿದೆ.
ಯೋಜನೆ ಅನುಷ್ಠಾನದ ಆರಂಭದಲ್ಲಿ ಬಂದಿದ್ದ ಅಪಸ್ವರಗಳು ಅನೇಕ. ಕೆಲವರಂತೂ ಈ ಯೋಜನೆ ಇಂಧನ ಇಲಾಖೆಯನ್ನೇ ದಿವಾಳಿ ಎಬ್ಬಿಸಲಿದೆ ಎಂದು ವ್ಯಾಖ್ಯಾನ ಮಾಡಿದರೆ,ಬಿಜೆಪಿ ಮತ್ತು ಸಂಘ ಪರಿವಾರದ ಕೆಲವರಂತೂ ಈ ನಿರ್ಧಾರ ವಿದ್ಯುತ್ ಸ್ವಾವಲಂಬಿ ಕರ್ನಾಟಕವನ್ನು ನಷ್ಟದ ಕೂಪಕ್ಕೆ ತಳ್ಳಲಿದೆ ಎಂದು ಆರೋಪಿಸಿದ್ದರು.
ಈ ಎಲ್ಲ ಟೀಕೆಗಳನ್ನು, ವ್ಯಾಖ್ಯಾನಗಳನ್ನು ಸವಾಲಾಗಿ ಸ್ವೀಕರಿಸಿದ ಮಂತ್ರಿ ಕೆ.ಜೆ.ಜಾರ್ಜ್ ಇಂಧನ ಇಲಾಖೆಯ ಅಧಿಕಾರಿಗಳ, ತಜ್ಞರ ಜೊತೆಗೆ ಸತತ ಸಮಾಲೋಚನೆ ನಡೆಸಿದರು. ಇಂತಹ ಯೋಜನೆ ಜಾರಿಯಲ್ಲಿರುವ ರಾಜ್ಯಗಳಿಂದ ಸಾಧಕ-ಭಾದಕಗಳ ಕುರಿತಾದ ವರದಿ ತರಿಸಿಕೊಂಡು ಎಲ್ಲವನ್ನೂ ಪರಿಶೀಲಿಸಿ, ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಬಾರದು,ಇಲಾಖೆಯ ಪ್ರಗತಿಗೆ ಅಡ್ಡಿಯಾಗದಂತೆ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಇಡೀ ದೇಶಕ್ಕೆ ಮಾದರಿಯಾದ ಯೋಜನೆ ಸಿದ್ದಪಡಿಸಿ ಅನುಷ್ಠಾನಕ್ಕೆ ತಂದರು.
ಇದೀಗ ಈ ಯೋಜನೆ ದೇಶದ ಗಮನ ಸೆಳೆದಿದೆ. ಇದಕ್ಕೆ ಪ್ರಮುಖ ಕಾರಣ ಉಚಿತವಾಗಿ ವಿದ್ಯುತ್ ನೀಡಿಯೂ ಇಲಾಖೆಯನ್ನು ಲಾಭದಾಯಕ ಮಾಡಬಹುದು ಎಂಬ ಲೆಕ್ಕಾಚಾರ. ಉಚಿತ ವಿದ್ಯುತ್ತಿನ ಲಾಭ ಪಡೆಯಲು ಗೃಹ ಬಳಕೆ ವಿದ್ಯುತ್ ಗ್ರಾಹಕರು ತಮ್ಮ ಬಳಕೆ ಮೇಲೆ ನಮೆಸ್ಕಾಂವಿಧಿಸಿಕೊಂಡಿದ್ದಾರೆ.ಇದರ ಪರಿಣಾಮ ಕಳೆದ ಎರಡು ತಿಂಗಳ ಗೃಹ ಬಳಕೆ ವಿದ್ಯುತ್ ಸರಾಸರಿಯಲ್ಲಿ ಶೇಕಡಾ 30 ರಷ್ಟು ಉಳಿತಾಯವಾಗಿದೆ ಎನ್ನುತ್ತವೆ ಇಂಧನ ಇಲಾಖೆಯ ಅಂಕಿಅಂಶಗಳು.
ಈ ರೀತಿಯಲ್ಲಿ ಉಳಿತಾಯವಾದ ವಿದ್ಯುತ್ ಕೈಗಾರಿಕೆ ಮತ್ತು ವಾಣಿಜ್ಯ ವಲಯಕ್ಕೆ ವರ್ಗಾಯಿಸಲಾಗಿದೆ. ಇದರಿಂದ ಉತ್ಪಾದನಾ ವಲಯದ ಚಟುವಟಿಕೆಗಳು ಹೆಚ್ಚಾಗಿವೆ.ಹೆಚ್ಚುವರಿಯಾಗಿ ಖಾಸಗಿ ವಲಯದಿಂದ ದುಬಾರಿ ಬೆಲೆ ತೆತ್ತು ವಿದ್ಯುತ್ ಖರೀದಿಸಬೇಕಾದ ಅವಲಂಬನೆ ಕಡಿಮೆಯಾಗಿ ಹಣ ಉಳಿತಾಯವಾಗಿದೆ.
ಈ ರೀತಿಯಲ್ಲಿ ಲಾಭಾಂಶ ಗಳಿಸಿದ ಹಿನ್ನೆಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆ ವಲಯಕ್ಕೆ ಉತ್ತೇಜನ ನೀಡಲಾಗಿದೆ ಈ ವಲಯದ ಗ್ರಾಹಕರಿಗೆ ಪ್ರತಿ ಯೂನಿಟ್ ವಿದ್ಯುತ್ ಗೆ ಐವತ್ತು ಪೈಸೆ ಸಹಾಯಧನ ನೀಡಲಾಗುತ್ತಿದೆ. ಈ ನೆರವು ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ವರದಾನವಾಗಿದೆ. ಈ ವಲಯದಲ್ಲಿ ಚಟುವಟಿಕೆಗಳು ಚುರುಕುಗೊಂಡು ಉದ್ಯೋಗ ಸೃಷ್ಟಿಯ ಪ್ರಮಾಣ ಹೆಚ್ಚಾಗಿದೆ. ಈ ಕೈಗಾರಿಕೆಗಳು ತಮ್ಮ ನೌಕರರಿಗೆ ಓ.ಟಿ. ನೀಡಲು ಆರಂಭಿಸಿವೆ.ಗೃಹ ಜ್ಯೋತಿ ಕಾರಣದಿಂದ ಆಗಿರುವ ಈ ಮಹತ್ವದ ಬದಲಾವಣೆ ಆಸಕ್ತರ ಗಮನ ಸೆಳೆದಿದೆ.ಯೋಜನೆ ಬಗ್ಗೆ ಅಧ್ಯಯನಕ್ಕೆ ಹಲವು ವಿಶ್ವವಿದ್ಯಾಲಯಗಳು ಆಸಕ್ತಿ ತೋರಿವೆ.
ಇದು ಒಂದು ಕಡೆಯಾದರೆ ಉಚಿತ ವಿದ್ಯುತ್ ನೀಡಿದ ವಿತರಣಾ ಸಂಸ್ಥೆಗಳಿಗೆ ಸರ್ಕಾರದ ನೆರವು ಹರಿದು ಬಂದಿದೆ.ಗೃಹಜ್ಯೋತಿ (Gruha Jyothi Scheme) ಯೋಜನೆಗಾಗಿ ರಾಜ್ಯ ಸರ್ಕಾರ ಎಲ್ಲ ಎಸ್ಕಾಂಗಳಿಗೆ ಸಹಾಯಧನ ಬಿಡುಗಡೆ ಮಾಡಿದೆ. ಜುಲೈ ತಿಂಗಳ ಸಹಾಯಧನವಾಗಿ ಒಟ್ಟು 467 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಈ ಸಹಾಯ ಧನವನ್ನು ನೀಡಲಾಗಿದೆ.
ಇದರಲ್ಲಿ ಬೆಂಗಳೂರು ವಿದ್ಯುತ್ ಕಂಪನಿಗೆ ಹೆಚ್ಚು ಸಹಾಯ ಧನ ಸಿಕ್ಕಿದೆ. ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬೆಸ್ಕಾಂಗೆ 235.07 ಕೋಟಿ, ಮೆಸ್ಕಾಂ ಗೆ 52.73 ಕೋಟಿ, ಹೆಸ್ಕಾಂ ಗೆ 83..48 ಕೋಟಿ ರೂಪಾಯಿ ಗೆಸ್ಕಾಂಗೆ 53.46 ಕೋಟಿ,ಮತ್ತು ಚೆಸ್ಕಾಂ ಗೆ 51.26 ಕೋಟಿ ರೂಪಾಯಿ ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಗೃಹ ಬಳಕೆ ಗ್ರಾಹಕರಿಗೆ ಶೂನ್ಯ ಬಿಲ್‌ನ್ನು ಈ ವಿದ್ಯುತ್ ಸರಬರಾಜು ಕಂಪನಿಗಳು ನೀಡಿತ್ತಿದ್ದು,, ಇದಕ್ಕೆ ಪರಿಹಾರ ರೂಪದಲ್ಲಿ ರಾಜ್ಯಸರ್ಕಾರ ಸಹಾಯಧನ ನೀಡುತ್ತಿದೆ.ಈ ಮೊತ್ತದಿಂದ ವಿದ್ಯುತ್ ವಿತರಣಾ ಕಂಪನಿಗಳೂ ಕೂಡ ಲಾಭದಾಯಕ ಸಂಸ್ಥೆಗಳಾಗುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದ್ದು,ಸದ್ಯದಲ್ಲೇ ನಷ್ಷದ ಸುಳಿಯಿಂದ ಹೊರ ಬರಲಿವೆ ಎನ್ನಲಾಗಿದೆ. ಇದಕ್ಕೆ ಪ್ರಮುಖ ಕಾರಣ ದಕ್ಷ ನಾಯಕತ್ವ, ದೂರದೃಷ್ಟಿಯ ಆಡಳಿತ ರಾಜಕೀಯ ಇಚ್ಛಾಶಕ್ತಿ ಹಾಗೂ ಬದ್ಧತೆ