ಹೊಸಬರ “ಥಗ್ಸ್ ಆಫ್ ರಾಮಘಡ’ ಚಿತ್ರವು ಬರುವ ಜನವರಿ 6ರಂದು ತೆರೆಕಾಣುತ್ತಿದೆ.
ಈಗಾಗಲೇ ಬಿಡುಗಡೆಯಾಗಿರುವ ಥಗ್ಸ್ ಆಫ್ ರಾಮಘಡ ಟ್ರೇಲರ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನೈಜ ಘಟನೆ ಆಧಾರಿತ ಈ ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ತಾರಾಬಳಗದಲ್ಲಿದ್ದಾರೆ.
ಚಿತ್ರದ ಟ್ರೇಲರ್‌ಗೆ ನಟ ಧನಂಜಯ್ ಸಾಥ್ ನೀಡಿದ್ದಾರೆ.ಈ ಚಿತ್ರವನ್ನು ಕಾರ್ತಿಕ್ ಮಾರಲಭಾವಿ ನಿರ್ದೇಶನ ಮಾಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಅವರು, “ಚಿತ್ರಕ್ಕಾಗಿ ಒಂದೂವರೆ ವರ್ಷದಿಂದ ಇಡೀ ತಂಡ ಕಷ್ಟ ಪಟ್ಟಿದ್ದೀವಿ. ಸಿನಿಮಾ ಜನವರಿ 6ಕ್ಕೆ ಬಿಡುಗಡೆಯಾಗುತ್ತಿದೆ, ಟ್ರೇಲರ್ ನೋಡಿ ಯಾಕಿಷ್ಟು ವೈಲೆನ್ಸ್ ಅನ್ನೋರಿಗೆ ಸಿನಿಮಾ ನೋಡಿದ ಮೇಲೆ ವೈಲೆನ್ಸ್ ಯಾಕೆ ಎಂದು ಅರ್ಥವಾಗುತ್ತೆ. ನಾನು ಯಾದಗಿರಿಯ ಪುಟ್ಟ ಹಳ್ಳಿಯಿಂದ ಬಂದವನು. ಧನಂಜಯ್ ಅವರ ಜಯನಗರ 4ನೇ ಬ್ಲಾಕ್ ಕಿರುಚಿತ್ರ ನೋಡಿ ಸ್ಫೂರ್ತಿ ಪಡೆದು ಚಿತ್ರರಂಗಕ್ಕೆ ಬಂದೆ. ನಾನು ಕಿರುಚಿತ್ರ ನಿರ್ದೇಶನ ಮಾಡೋಕೆ ಆರಂಭಿಸಿದೆ. ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಊರಿನಲ್ಲಿ ನಮ್ಮ ಹಿರಿಯರು ಹಿಂದೆ ನಡೆದ ಘಟನೆ ಬಗ್ಗೆ ಕಥೆ ಹೇಳುತ್ತಿದ್ದರು. ಆ ಘಟನೆ ಆಧಾರವಾಗಿಟ್ಟುಕೊಂಡು ಕಥೆ ಹೆಣೆದು ಅದಕ್ಕೊಂದಿಷ್ಟು ಸಿನಿಮೇಟಿಕ್ ಟಚ್ ಕೊಟ್ಟಿದ್ದೇನೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ.
ಚಿತ್ರದಲ್ಲಿ ಚಂದನ್ ರಾಜ್ ನಾಯಕರಾಗಿ ನಟಿಸಿದ್ದಾರೆ. “ಈ ಚಿತ್ರದ ಹಿಂದೆ ಇಡೀ ಚಿತ್ರತಂಡದ ಪರಿಶ್ರಮವಿದೆ. ನೈಜ ಘಟನೆ ಆಧರಿಸಿದ ಸಿನಿಮಾವಿದು. ಹಾಗಾಗಿ, ವೈಲೆನ್ಸ್ ಇದೆ. ಜನವರಿ 6ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ. ಸಿನಿಮಾ ಗೆದ್ದರೆ ನಮ್ಮೆಲ್ಲರ ಕನಸು ನನಸಾಗುತ್ತದೆ’ ಎನ್ನುವುದು ಅವರ ಮಾತು.
ಇನ್ನೊಬ್ಬ ನಾಯಕ ನಟ ಅಶ್ವಿನ್ ಹಾಸನ್ ಮಾತನಾಡಿ ಲಾಕ್‌ಡೌನ್ ನಲ್ಲಿ ಕೇಳಿದ ಕಥೆ ಇದು. ಯಾವುದೇ ಸಿನಿಮಾವಿರಲಿ, ಪುಟ್ಟ ಪಾತ್ರವಿರಲಿ ದೊಡ್ಡದಿರಲಿ ಎಲ್ಲಾ ಪಾತ್ರಗಳನ್ನು ಇಲ್ಲಿವರೆಗೆ ಮಾಡಿಕೊಂಡು ಬಂದಿದ್ದೇನೆ. ಇದರಲ್ಲಿ ಲೀಡ್‌ರೋಲ್ ನಲ್ಲಿ ನಟಿಸಿದ್ದೇನೆ. ಸ್ಯಾಮ್ಯುಯಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಲೀಡ್‌ರೋಲ್ ಅಷ್ಟು ಸುಲಭವಲ್ಲ. ನಿರ್ದೇಶಕರು ನನ್ನ ಮೇಲೆ ನಂಬಿಕೆ ಇಟ್ಟು ಪಾತ್ರ ನೀಡಿದ್ದಾರೆ ಅವರಿಗೆ ತೃಪ್ತಿ ಆಗೋ ಹಾಗೆ ನಟಿಸಿದ್ದೇನೆ. ಈ ಸಿನಿಮಾ ನಮ್ಮೆಲ್ಲರ ಕನಸು, ಗೆಲ್ಲಲೇಬೇಕು ಎಂದು ಚಿತ್ರವನ್ನು ಮಾಡಿದ್ದೀವಿ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ.
ಈ ಚಿತ್ರವನ್ನು ಭಾರತ್ ಟಾಕೀಸ್‌ನಡಿ ಜೈ ಕುಮಾರ್, ಕೀರ್ತಿ ರಾಜ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಶಶಾಂಕ್ ಶೇಷಗಿರಿ, ಅನುರಾಧ ಭಟ್ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
Previous Articleರಶ್ಮಿಕಾ ಗೆ 5 ನಿಮಿಷಕ್ಕೆ 5 ಕೋಟಿ!
Next Article ಛಲವಿದ್ದರೆ ಏನು ಬೇಕಾದರೂ ಮಾಡಬಹುದು-ದೀಪಕ್ ತಿಮ್ಮಯ