ಕೋಡಿಹಳ್ಳಿ ಚಂದ್ರಶೇಖರ್ ಅವರ ಬೆಂಬಲಿಗ ಕನ್ನಡ ರಕ್ಷಣಾ ವೇದಿಕೆಯ ಹೆಸರು ಶಾಲು ಹಾಕಿದ ಕಾರ್ಯಕರ್ತರು ಮಸಿ ಎರಚಿ ಮಾರಾಮಾರಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಗಾಂಧಿ ಭವನದಲ್ಲಿ ಇಂದು ಮಧ್ಯಾಹ್ನ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಮಸಿ ಎರಚಿ ಕುರ್ಚಿ ಎಸೆದು ಮಾರಾಮಾರಿ ಮಾಡಿದ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ(ಪ್ರಭಾರ)ಡಾ.ಎಸ್. ಡಿ.ಶರಣಪ್ಪ ಅವರು ತಿಳಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು ಇದನ್ನು ರಾಕೇಶ್ ಟಿಕಾಯತ್ ಅವರು ಇದನ್ನು ಪ್ರಸ್ತಾಪಿಸಿದ ವೇಳೆ ಮಾರಾಮಾರಿ ನಡೆದಿದೆ.
ಗಾಂಧಿ ಭವನದಲ್ಲಿ ನಡೆದ “ರೈತ ಚಳುವಳಿ ಆತ್ಮಾವಲೋಕನ ಹಾಗು ಸ್ಪಷ್ಟೀಕರಣ ಸಭೆ”ಯಲ್ಲಿ ಭಾಗಿಯಾಗಿದ್ದ ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ ಎಸೆಯಲಾಗಿದೆ. ಕರ್ನಾಟಕ ರೈತ ಮುಖಂಡ ಕೆ.ಚಂದ್ರಶೇಖರ್ ಬೆಂಬಲಿಗರಿಂದ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಯುಧ್ವೀರ್ ಸಿಂಗ್ ಮೇಲೆ ಕಪ್ಪು ಬಣ್ಣ ಎರಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಇದಲ್ಲದೆ ಸ್ಥಳದಲ್ಲಿ ಜನರು ಒಬ್ಬರ ಮೇಲೆ ಒಬ್ಬರು ಕುರ್ಚಿಗಳನ್ನು ಎಸೆಯುವ ದೃಶ್ಯಗಳು ಕಂಡು ಬಂದಿವೆ. ಮಾಧ್ಯಮಗಳೊಂದಿಗೆ ಮಾತನಾಡಿದ ಟಿಕಾಯತ್, ಸ್ಥಳೀಯ ಪೊಲೀಸರ ಮೇಲೆ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಜೊತೆಗೆ ಯಾವುದೇ ಭದ್ರತೆಯನ್ನು ನೀಡಲಾಗಿಲ್ಲ ಎಂದು ಆರೋಪಿಸಿದ್ದು ಇದಕ್ಕೆ ರಾಜ್ಯ ಸರ್ಕಾರದ ಬೆಂಬಲವಿದೆ ಎಂದು ಆರೋಪಿಸಿದ್ದಾರೆ. ಯುದುವೀರ್ ಸಿಂಗ್, ತಮಿಳುನಾಡಿನ ನಲ್ಲಗೌಂಡರ್ ರಾಜ್ಯದ ಪ್ರಮುಖ ರೈತ ಮುಖಂಡರಾದ ಸುರೇಶ್ ಬಾಬು ಪಾಟೀಲ್, ಕೆ.ಟಿ.ಗಂಗಾಧರ್, ಶ್ರೀಮತಿ ಅನುಸೂಯಮ್ಮ, ರಾಜೇಗೌಡ, ಚುಕ್ಕಿ ನಂಜುಂಡಸ್ವಾಮಿ, ಚಿಂತಕರಾದ ಪ್ರೊ ಹಿ.ಶಿ. ರಾಮಚಂದ್ರಗೌಡ, ಪ್ರೊ ರವಿವರ್ಮ ಕುಮಾರ್ ಸೇರಿದಂತೆ ಅನೇಕ ರೈತ ಹೋರಾಟಗಾರರು “ರೈತ ಚಳುವಳಿ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ”ಯಲ್ಲಿ ಪಾಲ್ಗೊಂಡಿದ್ದರು. ಸಭೆಯ ನಂತರ ಪತ್ರಿಕಾಗೋಷ್ಟಿ ನಡೆಸಿದ ರೈತ ಮುಖಂಡರು ಕೆಲವು ಆಗ್ರಹಗಳನ್ನು ಮಾಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಭ್ರಷ್ಟಾಚಾರದ ಸ್ಪಷ್ಟೀಕರಣ ನೀಡುತ್ತಿದ್ದ ವೇಳೆ ಮಸಿ ಬಳಿಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಕೇಶ್ ಟಿಕಾಯತ್, ಮಸಿ ಬಳಿದವರು ಯಾರು ಎಂಬುದು ಗೊತ್ತಿಲ್ಲ. ಆದರೆ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ ಎಂದಿದ್ದಾರೆ. ಈಗಾಗಲೇ ಮಸಿ ಬಳಿದಿರುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
Previous Articleವಿವಾದಕ್ಕೀಡಾದ ಕೊಡಗಿನ ಬುರ್ಕಾ ಡ್ಯಾನ್ಸ್
Next Article ಕಾಳಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ