ಬೆಂಗಳೂರು,ಫೆ.12-
ಸಂಚಾರ ನಿಯಮಗಳ ಉಲ್ಲಂಘನೆಯ (Traffic rules violation) ದಂಡ ಪಾವತಿಗೆ ರಾಜ್ಯ ಸರ್ಕಾರ ನೀಡಿದ್ದ ಶೇ.50ರ ರಿಯಾಯಿತಿಯ ಸೌಲಭ್ಯ ನಿನ್ನೆ ಅಂತ್ಯಗೊಂಡಿದೆ. ರಾಜ್ಯಾದ್ಯಂತ ಕಳೆದ 9 ದಿನಗಳಲ್ಲಿ 52.49 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿಂದ ಒಟ್ಟು 130.86 ಕೋಟಿ ರೂಪಾಯಿಗಳಿಗೂ ಹೆಚ್ಚು ಬಾಕಿ ದಂಡ ಸಂಗ್ರಹವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ 9 ದಿನಗಳಲ್ಲಿ 41.20 ಲಕ್ಷ ಪ್ರಕರಣಗಳಿಂದ ಒಟ್ಟು 120.76 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ.
ಇದೇ ವೇಳೆ, ಹುಬ್ಬಳ್ಳಿ–ಧಾರವಾಡದಲ್ಲಿ 73.31 ಲಕ್ಷ ದಂಡ ವಸೂಲಿಯಾಗಿದೆ. ಬೆಳಗಾವಿಯಲ್ಲಿ 29,520 ಪ್ರಕರಣಗಳಲ್ಲಿ 57.94 ಲಕ್ಷ ದಂಡ ಪಾವತಿಯಾಗಿದೆ. ಕೊನೆಯ ದಿನವಾದ ನಿನ್ನೆ ಬೆಂಗಳೂರಿನಲ್ಲಿ 9.45 ಲಕ್ಷ ಪ್ರಕರಣಗಳಿಂದ 31.26 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಕಳೆದ 9 ದಿನಗಳಲ್ಲಿ ದಿನವೊಂದರಲ್ಲಿ ಸಂಗ್ರಹವಾದ ಅತಿ ಹೆಚ್ಚು ದಂಡದ ಮೊತ್ತ ಇದಾಗಿದೆ. ಇದೇ ವೇಳೆ, ಹುಬ್ಬಳ್ಳಿ-ಧಾರವಾಡ ಕಮಿನಷರೇಟ್ (Hubli-Dharwad Commissionerate) ವ್ಯಾಪ್ತಿಯಲ್ಲಿ 25,61,175 ದಂಡ ಸಂಗ್ರಹಿಸಲಾಗಿದೆ.
ದಂಡ ಪಾವತಿಸಲು ಕೊನೆಯ ದಿನವಾದ ನಿನ್ನೆ ಸಂಚಾರಿ ಪೊಲೀಸ್ ಠಾಣೆಗಳ ಮುಂಭಾಗದಲ್ಲಿ ಜನರು ಸರದಿ ಸಾಲಿನಲ್ಲಿ ನಿಂತಿದ್ದು ಕಂಡುಬಂತು. ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಗೆ ಒಂದೆರಡು ಕೌಂಟರ್‌ಗಳನ್ನು ತೆರೆದು ದಂಡದ ಹಣ ಸಂಗ್ರಹಿಸುತ್ತಿದ್ದ ಪೊಲೀಸರು, ಸಾರ್ವಜನಿಕರ ಕ್ಯೂ ಹೆಚ್ಚಾದಂತೆ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದು ದಂಡ ಪಾವತಿಗೆ ಅವಕಾಶ ಕಲ್ಪಿಸಿದರು.
ಈ ಮಧ್ಯೆ, ಸರತಿ ಸಾಲಿನಲ್ಲಿ ನಿಂತು ದಂಡ ಪಾವತಿ ಮಾಡುತ್ತಿದ್ದ ಸಾರ್ವಜನಿಕರು, ಶೇ.50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ಒಳ್ಳೆಯದು. ಆದರೆ, ಕಡಿಮೆ ಅವಧಿ ಇರುವುದರಿಂದ ಇನ್ನೂ ಸಾಕಷ್ಟು ಮಂದಿಗೆ ದಂಡ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ದಂಡ ಪಾವತಿ ಇರುವ ಕಾಲಾವಧಿಯನ್ನು ಮತ್ತೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
57 ಕೇಸ್ ಗಳಿಗೆ ದಂಡ:
ಹುಬ್ಬಳ್ಳಿಯ ವಾಹನ ಸವಾರನೊಬ್ಬ ಬರೋಬ್ಬರಿ 57 ಪ್ರಕರಣಗಳಿಗೆ ದಂಡ ಪಾವತಿಸಿದ್ದಾನೆ. ಹುಬ್ಬಳ್ಳಿ ನಿವಾಸಿ ಸೂರಜ್ ಸಿಂಗ್ ಠಾಕೂರ್ ಎಂಬ ಯುವಕನ ಬೈಕ್ ಮೇಲೆ 57 ಪ್ರಕರಣಗಳು ದಾಖಲಾಗಿದ್ದವು. ದಂಡದ ಮೊತ್ತ 28,500 ರೂ. ಆಗಿತ್ತು. ರಿಯಾಯಿತಿ ಹಿನ್ನೆಲೆಯಲ್ಲಿ ಹಳೆ ಕೋರ್ಟ್ ಸರ್ಕಲ್ ಹತ್ತಿರ ಸಂಚಾರಿ ಪೊಲೀಸರ ಬಳಿ 14,250 ರೂ. ದಂಡ ಕಟ್ಡಿದ್ದಾನೆ.