ಬೆಂಗಳೂರು,ಅ.5 – ಮಹಾನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಿಸಲು 190 ಕಿ.ಮೀ ನಷ್ಟು ಉದ್ದದ ಸುರಂಗ ರಸ್ತೆ (Tunnel Roads) ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.ಸರ್ಕಾರದ ಈ ಪ್ರಸ್ತಾವನೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಹಲವು ಸಂಸ್ಥೆಗಳು ಆಸಕ್ತಿ ತೋರಿದ್ದವು ಇದರಲ್ಲಿ 8 ಕಂಪನಿಗಳು ಇದಕ್ಕೆ ಅರ್ಹತೆ ಪಡೆದುಕೊಂಡಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕಂಪನಿಗಳು ತಮ್ಮ ಕಾರ್ಯಸಾಧ್ಯತಾ ವರದಿ ಸಲ್ಲಿಸಲಿದ್ದು, 45 ದಿನಗಳ ಒಳಗಾಗಿ ಕಾಮಗಾರಿಗೆ ಟೆಂಡರ್ ಕರೆಯಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಈ ಸಂಸ್ಥೆಗಳು ಸುರಂಗ ರಸ್ತೆ 4 ಪಥ ಇರಬೇಕಾ,ಅಥವಾ 6 ಪಥದಲ್ಲಿ ನಿರ್ಮಿಸಬೇಕೆ? ಸುರಂಗ ಮಾರ್ಗ (Tunnel Roads) ಎಲ್ಲಿ ಆರಂಭವಾಗಿ ಎಲ್ಲಿ ಅಂತ್ಯವಾಗಬೇಕು, ಎಲ್ಲೆಲ್ಲಿ ತೆರೆದುಕೊಳ್ಳಬೇಕು? ಎಂಬ ಬಗ್ಗೆ ಈ ಕಂಪನಿಗಳು ಅಧ್ಯಯನ ಮಾಡಿ ವರದಿ ನೀಡಲಿವೆ ಎಂದು ತಿಳಿಸಿದರು ಮಹತ್ವಾಕಾಂಕ್ಷೆಯ ಈ ಯೋಜನೆಗೆ ಬಾರಿ ಮಾಣದ ಹಣಕಾಸಿನ ಅಗತ್ಯವಿದೆ. ಹೀಗಾಗಿ ಸಂಪನ್ಮೂಲ ಕ್ರೋಡೀಕರಿಸಿ ಹಂತ ಹಂತವಾಗಿ ಮಾಡಬೇಕಾಗುತ್ತದೆ. ನಾವು ಸದ್ಯಕ್ಕೆ 190 ಕಿ.ಮೀ ನಷ್ಟು ಪ್ರಸ್ತಾವನೆ ನೀಡಿದ್ದೇವೆ.ಇದರಲ್ಲಿ ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಸ್ಟೀಂ ಮಾಲ್ ಜಕ್ಷನ್ ನಿಂದ ಮೇಖ್ರಿ ವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯ ವೃತ್ತ, ಟ್ರಿನಿಟಿ ವೃತ್ತ, ಸರ್ಜಾಪುರ ರಸ್ತೆ, ಹೊಸೂರು, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆ ಶಿರಸಿ ಸರ್ಕಲ್, ಮಾಗಡಿ ರಸ್ತೆ, ತುಮಕೂರು ರಸ್ತೆ ಯಶವಂತಪುರ ಜಕ್ಷನ್, ಹೊರ ವರ್ತುಲ ರಸ್ತೆಯಲ್ಲಿ ಗೊರಗುಂಟೆ ಪಾಳ್ಯ, ಕೆ.ಆರ್ ಪುರಂ, ಸಿಲ್ಕ್ ಬೋರ್ಡ್ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಅದ್ಯ ಮಳೆ ನಿಂತಿದೆ. ಹೀಗಾಗಿ ಮಳೆ ನೀರು ಚರಂಡಿ ಕಾಮಗಾರಿಗಳು ಸೇರಿದಂತೆ ಪ್ರಮುಖ ಆದ್ಯತೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ.ಗುತ್ತಿಗೆದಾರರು ತ್ವರಿತವಾಗಿ ಕೆಲಸ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಪಾಲಿಕೆ ಇಂಜಿನಿಯರ್ ಗಳು ಸಂಚಾರಿ ಪೊಲೀಸರ ಸಹಯೋಗದೊಂದಿಗೆ ಕೆಲಸ ಮಾಡಬೇಕು. ಸಂಚಾರಿ ಪೊಲೀಸರು ಸೂಚಿಸುವ ಕಡೆಗಳಲ್ಲಿ ತ್ವರಿತವಾಗಿ ರಸ್ತೆಗುಂಡಿ ಸರಿಪಡಿಸುವ ಕೆಲಸ ಮಾಡಬೇಕು. ರಸ್ತೆಗುಂಡಿಗಳಿಂದ ಯಾವುದೇ ಅನಾಹುತ ಆಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.