ಬೆಂಗಳೂರು, ಅ.5 – ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ (Bitcoin) ಹಗರಣದ ತನಿಖೆಗೆ ಇದೀಗ ಹಠಾತ್ ಹೊಸ ತಿರುವು ಸಿಕ್ಕಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಈ ಹಗರಣದ ಕಿಂಗ್ ಪಿನ್ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣ ಎಂದೇ ಎಲ್ಕರೂ ನಂಬಿದ್ದರು. ಆದರೆ ಇದೀಗ ಶ್ರೀಕಿಗಿಂತಲೂ ಐನಾತಿ ಹ್ಯಾಕರ್ ಇರುವುದು ಪತ್ತೆಯಾಗಿದೆ.
ಈ ಹಗರಣದ ತನಿಖೆ ಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್ ಐಟಿ)ದ ಅಧಿಕಾರಿಗಳು ಇನ್ನೊಬ್ಬ ಕಿಂಗ್‌ಪಿನ್ ಹ್ಯಾಕರ್ ನನ್ನು ಪತ್ತೆಹಚ್ಚಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ಪಂಜಾಬ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದಲ್ಲಿ ಈ ಹಗರಣ ಬೆಳಕಿಗೆ ಬಂದ ನಾಲ್ಕು ವರ್ಷಗಳಿಂದ ಭೂಗತನಾಗಿದ್ದ ಈ ಕಿಂಗ್‌ಪಿನ್ ಶ್ರೀಕಿಗಿಂತ ಮೊದಲೇ ಬಿಟ್‌ಕಾಯಿನ್ ದೋಚಿರುವುದು ಪತ್ತೆಯಾಗಿದೆ.
ಇಂಟರ್‌ನ್ಯಾಷನಲ್ ಹ್ಯಾಕರ್ ಆಗಿರುವ ಖದೀಮ ಪಂಜಾಬ್ ಮೂಲದ ರಾಜೇಂದ್ರ ಸಿಂಗ್ ಎಂದು ಪತ್ತೆ ಹಚ್ಚಲಾಗಿದ್ದು,ಆತನನ್ನು ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆ ಕೈಗೊಳ್ಳಲಾಗಿದೆ.
ಶ್ರೀಕಿಗಿಂತ ಮೊದಲೇ ಹಗರಣದಲ್ಲಿ ರಾಜೇಂದ್ರ ಸಿಂಗ್ ಪಾತ್ರವಿತ್ತು. ಹಗರಣದ ಗ್ಯಾಂಗ್‌ಗೆ ಮೊದಲು ಸಾಥ್ ನೀಡಿದ್ದವನು ಈ ರಾಜೇಂದ್ರ ಸಿಂಗ್ ಎಂದು ಗೊತ್ತಾಗಿದೆ
ಶ್ರೀಕಿಗೂ ಮೊದಲೇ ಹ್ಯಾಕಿಂಗ್‌ನಲ್ಲಿ ಎಕ್ಸ್‌ಪರ್ಟ್ ಆಗಿದ್ದ ಈತ ಸರ್ಕಾರಿ ಹಾಗೂ ಖಾಸಗಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವುದರಲ್ಲಿ ಪರಿಣಿತನಾಗಿದ್ದ.
ಇಂತಹ ಪರಿಣಿತ ಇದಕ್ಕಾಗಿ ತನ್ನದೇ ಆದ ಗ್ಯಾಂಗ್ ವೊಂದನ್ನು ಕಟ್ಟಿದ್ದ ಈ ಗ್ಯಾಂಗ್‌ಗೆ ಪರಿಚಯವಾಗಿದ್ದ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ.ಆನಂತರದಲ್ಲಿ ಈ ಇಬ್ಬರೂ ಸೇರಿ ವೆಬ್‌ಸೈಟ್ ಹ್ಯಾಕ್ ಮಾಡಿ ವಂಚನೆ ಮಾಡಿದ್ದರು.
ಶ್ರೀಕಿ ಬಂಧನವಾಗುತ್ತಿದ್ದಂತೆ ರಾಜೇಂದ್ರ ಸಿಂಗ್ ಪರಾರಿಯಾಗಿ ಭೂಗತನಾಗಿದ್ದು ಪ್ರಕರಣದಲ್ಲಿ ಇದುವರೆಗೂ ಎಲ್ಲೂ ರಾಜೇಂದ್ರ ಸಿಂಗ್ ಹೆಸರು ಬಂದಿರಲಿಲ್ಲ. ಎಸ್ ಐಟಿ ತನಿಖೆಯಲ್ಲಿ ರಾಜೇಂದ್ರ ಸಿಂಗ್ ಪಾತ್ರವಿರುವುದು ಬೆಳಕಿಗೆ ಬಂದಿದೆ.
ರಾಜೇಂದ್ರ ಸಿಂಗ್ ಜಾಡು ಹಿಡಿದು ಪಂಜಾಬ್‌ಗೆ ಹೊರಟಿದ್ದ ಎಸ್ ಐಟಿ ಅಧಿಕಾರಿಗಳು, ಅಲ್ಲಿ ಆತನನ್ನು ಬಂಧಿಸಿ ಕರೆತಂದಿದೆ. ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ರಾಜೇಂದ್ರ ಸಿಂಗ್ ಬಂಧನ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ನಡೆದಿದೆ. ರಾಜೇಂದ್ರ ಸಿಂಗ್‌ನನ್ನು ಎಸ್‌ಐಟಿ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ಮುಂದಿನ ತನಿಖಾ ದೃಷ್ಟಿಯಿಂದ ಕೇಂದ್ರ ತನಿಖಾ ಸಂಸ್ಥೆಗಳ ನೆರವು ಕೇಳಿದೆ.ಶ್ರೀಕಿಯಿಂದ ಸುಮಾರು 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್‌ಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಹೈಕೋರ್ಟ್ ವಿನಾಯ್ತಿ:
ಬಿಟ್ ಕಾಯಿನ್ ಹಗರಣದ ಆರೋಪಿಗಳಾದ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣ, ಸುನೀಶ್ ಹೆಗ್ಡೆ ಮತ್ತು ಹೇಮಂತ್ ಮುದ್ದಪ್ಪ ಅವರಿಗೆ ಅರ್ಜಿಯ ಕುರಿತ ಮುಂದಿನ ದಿನಾಂಕದ ವರೆಗೂ ಖುದ್ದು ವಿಚಾರಣೆಗೆ ಹಾಜರಾಗುವುದಕ್ಕೆ ಕೆಲ ದಿನಗಳ ಹಿಂದಷ್ಟೇ ವಿನಾಯ್ತಿ ನೀಡಿ ಹೈಕೋರ್ಟ್ ಆದೇಶಿಸಿತ್ತು.
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಕಾನೂನು ಪ್ರಕ್ರಿಯೆ ವಜಾ ಮಾಡುವಂತೆ ಕೋರಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ, ಸಹ ಆರೋಪಿಗಳಾದ ಸುನೀಶ್ ಹೆಗ್ಡೆ ಮತ್ತು ಪ್ರಸಿಧ್ ಶೆಟ್ಟಿ ಹಾಗೂ ಹೇಮಂತ್ ಮುದ್ದಪ್ಪ ಅವರು ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿತ್ತು.
ಏನಿದು ಪ್ರಕರಣ:
2020ರಲ್ಲಿ ಕೆಂಪೇಗೌಡ ನಗರ ಸಮೀಪ ಡ್ರಗ್ ಮಾರಾಟಕ್ಕೆ ಯತ್ನಿಸಿದ್ದಾಗ ಶ್ರೀಕಿ ಹಾಗೂ ಆತನ ಸ್ನೇಹಿತರು ಸಿಸಿಬಿ ಬಲೆಗೆ ಬಿದ್ದಿದ್ದರು. ಬಳಿಕ ವಿಚಾರಣೆ ವೇಳೆ ಅಂತಾರಾಷ್ಟ್ರೀಯ ಮಟ್ಟದ ಆನ್‌ಲೈನ್ ಗೇಮಿಂಗ್ ಕಂಪನಿಗಳು ಹಾಗೂ ಸರ್ಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಸುಮಾರು 11 ಕೋಟಿ ರು. ಹಣವನ್ನು ಶ್ರೀಕಿ ದೋಚಿದ್ದ ಸಂಗತಿ ಬಯಲಾಗಿತ್ತು. ಹೀಗೆ ದೋಚಿದ್ದ ಹಣವನ್ನು ಬಿಟ್ ಕಾಯಿನ್‌ಗಳಾಗಿ ಪರಿವರ್ತಿಸಿ ಡ್ರಗ್ ದಂಧೆಗೆ ಶ್ರೀಕಿ ಬಳಸಿದ್ದ ಎನ್ನಲಾಗಿತ್ತು.