ಬೆಂಗಳೂರು,ಫೆ.5-
ಇತ್ತೀಚೆಗೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಹಾಲಕ್ಷ್ಮಿಲೇಔಟ್ (Mahalakshmi Layout) ವಿಧಾನಸಭಾ ಕ್ಷೇತ್ರದ ವಿದ್ಯಾವಂತ ಅರ್ಹ ನಿರುದ್ಯೋಗಿಗಳು ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಶ್ರೀಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ (Sri Mahalakshmi Education Trust) ವತಿಯಿಂದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬೋವಿಪಾಳ್ಯದ ಬಿಜಿಎಸ್ ಕಾಲೇಜು ಕ್ಯಾಂಪಸ್ (BGS College campus) ನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.
ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ (K Gopalaiah) , ‘ನಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ಉದ್ಯೋಗಗಳನ್ನು ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ. ಉದ್ಯೋಗ ಮೇಳದಲ್ಲಿ ಆಯ್ಕೆಯಾಗದಿರುವವರು ನಿರಾಶೆಯಾಗಬಾರದು. ನಿಮ್ಮ ಶ್ರಮಕ್ಕೆ ಮುಂದಿನ ದಿನಗಳಲ್ಲಿ ಸೂಕ್ತ ಫಲ ಸಿಗಲಿದೆ’ ಎಂದು ವಿಶ್ವಾಸ ತುಂಬಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸಂಸದ ಡಿ.ವಿ ಸದಾನಂದಗೌಡ (D.V. Sadananda Gowda) ಮಾತನಾಡಿ, ಇಂದಿನ ಹೊಸ ಶಿಕ್ಷಣ ನೀತಿಯಲ್ಲಿ ಎಂಟನೇ ತರಗತಿಯಿಂದ ಕೌಶಲ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮನಸ್ಸಿನ ಭಾವನೆಗಳನ್ನು ಸಕ್ರಿಯವಾಗಿ ಪರಿವರ್ತನೆ ಮಾಡುವ ಕಾಯಕವೇ ಕೌಶಲ್ಯ ಎಂದು ತಿಳಿಸಿದರು.