ಬೆಂಗಳೂರು,
ಇನ್ಫೋಸಿಸ್ ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆ ಅದರಲ್ಲೂ ಕರ್ನಾಟಕದ ಈ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಅತ್ಯಂತ ಕನಿಷ್ಠ ಬಂಡವಾಳದಲ್ಲಿ ಸಮಾನ ಮನಸ್ಕರು ಒಟ್ಟಾಗಿ ಹುಟ್ಟು ಹಾಕಿದ ಈ ಸಂಸ್ಥೆ ತನ್ನ ಕಾರ್ಯದಕ್ಷತೆ ಶಿಸ್ತು ಮತ್ತು ರಾಜ್ಯ ಸರ್ಕಾರದ ನೆರವಿನಿಂದ ಅತ್ಯಂತ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ.
ಈ ಸಂಸ್ಥೆಯ ದೊಡ್ಡ ಯಶಸ್ಸಿಗೆ ಕರ್ನಾಟಕ ಸರ್ಕಾರದ ಕೊಡುಗೆ ಕೂಡ ಇದೆ ಅತ್ಯಂತ ಕಡಿಮೆ ದರದಲ್ಲಿ ಈ ಸಂಸ್ಥೆಗೆ ಭೂಮಿ ನೀಡಿದ ಅಂದಿನ ಸರ್ಕಾರ ನೋಂದಣಿ ಶುಲ್ಕ ರಿಯಾಯಿತಿ ಸೇರಿದಂತೆ ಹಲವು ಉತ್ತೇಜನಗಳನ್ನು ನೀಡಿತ್ತು. ಈ ಸಮಯದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆ ಎಂಬ ವಿಶೇಷಣವನ್ನು ರಾಜ್ಯ ಸರ್ಕಾರ ಪರಿಗಣಿಸಿತ್ತು.
ಇಂತಹ ವಿಶೇಷ ಪ್ರಕರಣದ ಹೆಸರಿನಲ್ಲಿ ರಿಯಾಯಿತಿ ದರದಲ್ಲಿ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಜಮೀನು ಪಡೆದ ಇನ್ಫೋಸಿಸ್ ಸಂಸ್ಥೆ ಇದೀಗ ಆ ಜಮೀನನ್ನು ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು ಹೊರವಲಯದ ಆನೇಕಲ್ ಸಮೀಪ ಇನ್ಫೋಸಿಸ್ ಸಂಸ್ಥೆ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಘಟಕ ಆರಂಭಿಸಲು ಆನೇಕಲ್ ಸಮೀಪದ ಅತ್ತಿಬೆಲೆ ಬಳಿಯಲ್ಲಿ 53.5 ಎಕರೆ ಜಮೀನನ್ನು ಕೆಐಎಡಿಬಿ ಮೂಲಕ ಪಡೆದುಕೊಂಡಿತ್ತು. ಆದರೆ ಇನ್ಫೋಸಿಸ್ ಇಲ್ಲಿ ಯಾವುದೇ ಚಟುವಟಿಕೆಗಳನ್ನು ಆರಂಭಿಸದೆ ಜಮೀನನ್ನು ಪೂರ್ವಂಕರ ಸಂಸ್ಥೆಗೆ 250 ಕೋಟಿ ರೂಪಾಯಿಗೆ ಮಾರಾಟ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ಪೂರ್ವಾಕರ ಸಂಸ್ಥೆಯ ನಿರ್ದೇಶಕ ಆಶಿಶ್ ಪುರ್ವಾಂಕರ ಅವರು ಸ್ಟಾಕ್ ಎಕ್ಸ್ ಚೇಂಜ್ ಗೆ ಸಲ್ಲಿಸಿರುವ ಮಹಿತಿಯಲ್ಲಿ ಇನ್ಫೋಸಿಸ್ ಸಂಸ್ಥೆಯಿಂದ 250 ಜಮೀನು ಖರೀದಿಸಲು ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಉಲ್ಲೇಖಿಸಿದ್ದಾರೆ ಇಲ್ಲಿ ಅತ್ಯುತ್ತಮ ಮೂಲಸೌಕರ್ಯವನ್ನು ಒಳಗೊಂಡ ವಸತಿ ಸಮುಚ್ಚಯ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಇದರ ಬೆನ್ನಲ್ಲೇ ಇನ್ಫೋಸಿಸ್ ಸಂಸ್ಥೆಯ ಕ್ರಮದ ಬಗ್ಗೆ ಹಲವಾರು ಮಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಅನಿಸಿಕೆಗಳನ್ನು ವ್ಯಕ್ತಪಡಿಸಿರುವ ಅನೇಕರು ಸರ್ಕಾರದಿಂದ ಮಾಹಿತಿ ತಂತ್ರಜ್ಞಾನ ವಲಯದ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹೆಸರಿನಲ್ಲಿ ಜಮೀನು ಪಡೆದಿರುವ ಇನ್ಫೋಸಿಸ್ ಸಂಸ್ಥೆ ಒಪ್ಪಂದವನ್ನು ಉಲ್ಲಂಘಿಸಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
Previous Articleಹೆಬ್ಬಾಳ ಫ್ಲೈ ಓವರ್ ಸಂಚಾರ ಈಗ ಸರಾಗ
Next Article ಮತ್ತೊಂದು ಆರೋಪದಲ್ಲಿ ಸಿಲುಕಿದ ಶರಣರು

