ಬೆಂಗಳೂರು:
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಬೆಂಗಳೂರು ನಗರದಲ್ಲಿ ನಡೆದ ಪ್ರತಿಭಟನೆ ರಾಜಕೀಯ ಹಾಗೂ ಕಾನೂನು ವಿವಾದಕ್ಕೆ ಕಾರಣವಾಗಿದೆ.
ಹೈಕೋರ್ಟ್ ಆದೇಶ ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ ವಿರುದ್ಧ ದೂರು ಸಲ್ಲಿಕೆಯಾಗಿದೆ.
ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಖಂಡಿಸಿ ಕೆಲವು ಸಂಘಟನೆಗಳು ಬೆಂಗಳೂರಿನ ಅಶೋಕ ನಗರದಲ್ಲಿ ಪ್ರತಿಭಟನೆ ನಡೆಸಿದ್ದವು. ಇದರಲ್ಲಿ ಹ್ಯಾರಿಸ್ ಭಾಗಿಯಾಗಿದ್ದರು.ಆದರೆ, ಈ ಪ್ರತಿಭಟನೆ ಹೈಕೋರ್ಟ್ ನಿರ್ದೇಶನ ಉಲ್ಲಂಘನೆ ಎಂಬ ಆರೋಪ ಕೇಳಿಬಂದಿದೆ.
ಸಾರ್ವಜನಿಕ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್ನಲ್ಲೇ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶನ ಇದೆ. ಅದರ ಹೊರತಾಗಿ ಬೇರೆ ಸ್ಥಳದಲ್ಲಿ ಪ್ರತಿಭಟನೆ ನಡೆಸುವುದು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದು ಹೇಳಿದೆ
ಇದೇ ಕಾರಣಕ್ಕೆ ಹ್ಯಾರಿಸ್ ನಡೆಸಿದ ಪ್ರತಿಭಟನೆ ವಿವಾದದ ಸ್ವರೂಪ ಪಡೆದುಕೊಂಡಿದೆ.ಹಿಂದೂ ಪರ ಸಂಘಟನೆಯೊಂದರ ಕಾರ್ಯಕರ್ತ ತೇಜಸ್ ಗೌಡ ಎಂಬುವವರು ಶಾಸಕ ಎನ್ಎ ಹ್ಯಾರಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಡಿಜಿ ಹಾಗೂ ಐಜಿಪಿಗೆ ದೂರು ಸಲ್ಲಿಸಿದ್ದಾರೆ.
ಮತ್ತೊಂದೆಡೆ ಈ ಪ್ರತಿಭಟನೆ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಪೊಲೀಸರು ಈಗಾಗಲೇ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅಶೋಕ್ ನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

