ಬೆಂಗಳೂರು,
ಬ್ಯಾನರ್ ಹಾಕುವ ಅತ್ಯಂತ ಸಣ್ಣ ಕಾರಣಕ್ಕೆ ಶಿಡ್ಲಘಟ್ಟದ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಉದ್ಧಟತನದಿಂದ ವರ್ತಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿದೆ. ಇದು ಫ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಅದ್ದೂರಿ ಬಿಡುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ ರಾಜ್ಯದ ಹಲವಡೆ ಸಿನಿಮಾ ಪ್ರಮೋಷನ್ ಕೂಡ ಭರ್ಜರಿಯಾಗಿ ನಡೆಯುತ್ತಿದೆ.
ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಸಿನಿಮಾ ಪ್ರಮೋಷನ್ ಆಯೋಜಿಸಲಾಗಿತ್ತು, ಅಂತೆಯೇ ಶಿಡ್ಲಘಟ್ಟದಲ್ಲಿ ನಡೆದ ಕಲ್ಟ್ ಸಿನಿಮಾ ಪ್ರಮೋಷನ್ ಕಾರ್ಯಕ್ರಮದ ಹಿನ್ನೆಲೆ ರಾಜೀವ್ ಗೌಡ ಅವರ ಬ್ಯಾನರ್‌ಗಳು ಹಾಕಲಾಗಿತ್ತು. ಇದರಲ್ಲಿ ಅನೇಕ ಬ್ಯಾನರ್ ಗಳಿಗೆ ಅನುಮತಿ ಪಡೆದುಕೊಂಡಿರಲಿಲ್ಲ ಹೀಗಾಗಿ ಪೌರ ಆಯುಕ್ತರು ಅನುಮತಿ ಪಡೆಯದೆ ಹಾಕಲಾಗಿರುವ ಬ್ಯಾನರ್ ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರು. ಈ ಬ್ಯಾನರ್ ತೆರವುಗೊಳಿಸಿರುವ ವಿಚಾರಕ್ಕೆ ಕೋಪಗೊಂಡ ರಾಜೀವ್ ಗೌಡ ಪೌರ ಆಯುಕ್ತರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಪೌರ ಆಯುಕ್ತರೊಂದಿಗೆ ರಾಜೀವ್ ಗೌಡ ದೂರವಾಣಿ ಕರೆ ಮಾಡಿ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಲ್ಲಿ ಅವರು ಬಳಸಿದ ಭಾಷೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಉಂಟು ಮಾಡಿತ್ತು. ನಂತರದಲ್ಲಿ ಇದಕ್ಕೆ ರಾಜಕೀಯ ನಂಟು ಕೂಡ ಸೇರ್ಪಡೆಯಾಯಿತು.
ಇದೀಗ ರಾಜೀವ ಗೌಡ ಅವರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರದೇಶ ಕಾಂಗ್ರೆಸ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಪಕ್ಷದ ಕಾರ್ಯಾಧ್ಯಕ್ಷರಾಗಿರುವ ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಅವರು ನೋಟಿಸ್ ನೀಡಿದ್ದು, ಒಂದು ವಾರದೊಳಗಾಗಿ ಉತ್ತರ ನೀಡುವಂತೆ ಸೂಚಿಸಿದ್ದಾರೆ.
ಮತ್ತೊಂದೆಡೆ ರಾಜೀವ್ ಗೌಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಲವರು ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿ ಅವರೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

