ಬೆಂಗಳೂರು,ಜ.23:
ಪ್ರಯಾಣಿಕರ ಸುರಕ್ಷತೆ ಸೇರಿದಂತೆ ಹಲವಾರು ಕಾರಣಗಳಿಂದ ಬೆಂಗಳೂರಿನಲ್ಲಿ ರದ್ದುಗೊಂಡಿದ್ದ ಬೈಕ್ ಟ್ಯಾಕ್ಸಿಗಳು ಮತ್ತೆ ರಾಜಧಾನಿಯಲ್ಲಿ ರಸ್ತೆಗಿಳಿಯಲಿವೆ.
ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗು ನ್ಯಾಯಮೂರ್ತಿ ಸಿಎಂ ಜೋಶಿ ನೇತೃತ್ವದ ವಿಭಾಗೀಯ ಪೀಠ ಕೆಲವು ಷರತ್ತುಗಳನ್ನು ವಿಧಿಸಿ ಬೆಂಗಳೂರಿನಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸಂಚರಿಸಲು ಅವಕಾಶ ನೀಡಿದೆ.
ಬೈಕ್ ಮಾಲೀಕರು ಅಥವಾ ಅಗ್ರಿಗೇಟರ್ ಗಳು ಸಾರಿಗೆ ವಾಹನಗಳನ್ನಾಗಿ ಬಳಸಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಅರ್ಹ ಮನವಿಗಳನ್ನು ಸರ್ಕಾರ ಪುರಸ್ಕರಿಸಿ ಅನುಮತಿ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ಬೈಕ್ ಟ್ಯಾಕ್ಸಿಗಳಲ್ಲಿ ಯಾವುದೇ ಸುರಕ್ಷತೆ ಇರುವುದಿಲ್ಲ ಪ್ರಯಾಣಿಕರ ವಾಹನಕ್ಕೆ ವಿಧಿಸಲಾಗಿರುವ ಷರತ್ತುಗಳನ್ನು ಬೈಕ್ ಟ್ಯಾಕ್ಸಿ ಸವಾರರು ಪಾಲಿಸುತ್ತಿಲ್ಲ ಖಾಸಗಿ ಬೈಕ್ ಮಾಲೀಕರು ಕೂಡ ಟ್ಯಾಕ್ಸಿಗಳಾಗಿ ತಮ್ಮ ವಾಹನಗಳನ್ನು ಓಡಿಸುತ್ತಿದ್ದಾರೆ ಇದರಿಂದ ನೋಂದಾಯಿತ ಪ್ರಯಾಣಿಕ ಟ್ಯಾಕ್ಸಿ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ ಎಂದು ಟ್ಯಾಕ್ಸಿ ಮಾಲೀಕರು ಮತ್ತು ಡ್ರೈವರ್ ಗಳ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಈ ಮನವಿಗಳನ್ನು ಪರಿಶೀಲಿಸಿದ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಓಡಿಸುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿ ಈ ಸಮಿತಿ ಕೂಡ ಬೈಕ್ ಟ್ಯಾಕ್ಸಿ ವ್ಯವಸ್ಥೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಿತ್ತು. ಇದನ್ನು ಆಧರಿಸಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರ ನಿಷೇಧಿಸಿತ್ತು.
ಇದನ್ನು ಪ್ರಶ್ನಿಸಿ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಗಳ ಸಂಘ ಮತ್ತು ಬೈಕ್ ಸವಾರರ ಸಂಘ ಹೈಕೋರ್ಟ್ ಗೆ ರಿಟ್ ಸಲ್ಲಿಸಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ ಇದೀಗ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ನಿಯಮಾವಳಿಗಳನ್ನು ರೂಪಿಸಲು ಸರ್ಕಾರಕ್ಕೆ ಆದೇಶ ನೀಡಿದೆ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತು ಮತ್ತು ಸ್ಪಷ್ಟ ನೋಂದಣಿ ಮಾಡಿಕೊಂಡ ಸಂಸ್ಥೆಗಳು ಮತ್ತು ಖಾಸಗಿ ಬೈಕ್ ಮಾಲೀಕರಿಗೆ ಬೈಕ್ ಟ್ಯಾಕ್ಸಿ ಓಡಿಸಲು ಅನುಮತಿ ನೀಡುವಂತೆ ಸೂಚನೆ ನೀಡಿದೆ.
Previous Articleಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು
Next Article ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

