ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರ ಸೂಪರ್ ಹಿಟ್ ಸಿನಿಮಾ ಕಾಂತಾರ-1 ಚಿತ್ರದ ದೈವ ಆಚರಣೆಯ ಅನುಕರಣೆ ಮೂಲಕ ಅವಹೇಳನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಟ ರಣವೀರ್ ಸಿಂಗ್ ತಮ್ಮ ಆರಾಧ್ಯ ದೈವದ ಅನುಕರಣೆ ಮಾಡಿ ಅಪಮಾನ ಮಾಡಿದ್ದಾರೆ ಇದರಿಂದ ನಮ್ಮ ನಂಬಿಕೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಕರಾವಳಿ ಕರ್ನಾಟಕದ ಚಾವುಂಡಿ ದೈವ ಸಂಪ್ರದಾಯವನ್ನು ಅವಹೇಳನ ಮಾಡುವ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆಗಳು ಮತ್ತು ಸನ್ನೆಗಳನ್ನು ನಟ ಮಾಡಿದ್ದಾರೆ ಎಂದು ವಕೀಲ ಪ್ರಶಾಂತ್ ಮೆಥಲ್ ಅವರು ದೂರು ದಾಖಲಿಸಿದ್ದರು.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಲಾಗಿತ್ತು.ಆದರೆ, ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದ ದೂರುದಾರರು ಬೆಂಗಳೂರಿನ 1 ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ನ್ಯಾಯಾಲಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರಣವೀರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲು ಮಾಡಲು ಆದೇಶಿಸಿದೆ.ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 196, 299 ಮತ್ತು 302 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ನವೆಂಬರ್ 28, 2025 ರಂದು ಗೋವಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆದಿತ್ತು.
ಈ ಕಾರ್ಯಕ್ರಮದ ನಿರ್ವಹಣೆಯನ್ನು ರಣವೀರ್ ಸಿಂಗ್ ನೆರವೇರಿಸಿದ್ದರು. ಈ ವೇಳೆ ಕಾಂತಾರ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದ ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದರು. ಕಾಂತಾರದ ಬಗ್ಗೆ ವಿವರಿಸುವಾಗ ದೈವವನ್ನು ದೆವ್ವ ಅಂತಲೇ ಹೇಳಿದ್ದರು. ಈ ಸಮಯದಲ್ಲಿ ಬಾಲಿವುಡ್‌ನ ದಿಗ್ಗಜರು ಇದ್ದರು. ರಿಷಬ್ ಶೆಟ್ಟಿ ಕೂಡ ಅಲ್ಲೇ ಎದುರು ಕುಳಿತಿದ್ದರು. ಇವರೆಲ್ಲರ ಸಮುಖದಲ್ಲಿಯೇ ರಣವೀರ್ ಸಿಂಗ್ ಮನಸೋ ಇಚ್ಛೆ ಮಾತನಾಡಿದ್ದರು.
ದೈವಗಳನ್ನು ಫೀಮೇಲ್ ಗೋಸ್ಟ್ (ಹೆಣ್ಣು ಪ್ರೇತ) ಎಂದು ಸಂಭೋಧಿಸಿದ್ದ ನಟ ರಣವೀರ್ ಸಿಂಗ್ ಅವರು ಗುಳಿಗ ದೈವ, ಚಾಮುಂಡೇಶ್ವರಿ ಬಗ್ಗೆ ಅಣಕ ಮಾಡಿದ್ದರು.
ರಣವೀರ್ ಸಿಂಗ್ ಅವರ ಈ ವರ್ತನೆಯ ಬಗ್ಗೆ ಅನೇಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟಿಕೆ ಕೂಡ ಕೇಳಿಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ರಣವೀರ್ ಸಿಂಗ್ ತಮ್ಮ ವರ್ತನೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚನೆ ಮಾಡಿದ್ದರು.
ತಾವು ಯಾರನ್ನು ಅಪಮಾನ ಗೊಳಿಸುವ ಅಥವಾ ದುರುದ್ದೇಶ ಪೂರ್ವಕವಾಗಿ ಈ ರೀತಿ ಮಾಡಿರಲಿಲ್ಲ ಕಾಂತಾರ ಚಿತ್ರದಲ್ಲಿರುವ ರಿಷಬ್ ಶೆಟ್ಟಿ ಅವರ ಅದ್ಭುತ ಅಭಿನಯವನ್ನು ಹೈಲೈಟ್ ಮಾಡುವುದೇ ಆಗಿತ್ತು. ಇಂತಹ ಒಂದು ದೃಶ್ಯವನ್ನು ಮಾಡಲು ಅದೆಷ್ಟು ಕಷ್ಟ ಎನ್ನುವುದು ನನಗೆ ಗೊತ್ತಿದೆ. ಅದು ನನಗೆ ತುಂಬಾನೆ ಇಷ್ಟ ಆಯಿತು. ಅದನ್ನು ಅನುಕರಣೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದು ವಿವಾದವನ್ನು ಸುಖಾಂತ್ಯಗೊಳಿಸುವ ಪ್ರಯತ್ನ ಮಾಡಿದ್ದರು.
ಆದರೆ ಇದನ್ನು ಅರ್ಜಿದಾರರು ಒಪ್ಪಿಲ್ಲ, ರಣವೀರ್ ದುರುದ್ದೇಶದಿಂದ ಪವಿತ್ರ ದೈವ ಸಂಪ್ರದಾಯಗಳನ್ನು ಅಸಭ್ಯ, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸುವ ಅಣಕ ವೇದಿಕೆ ಪ್ರದರ್ಶನದಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ. ಈ ದೂರಿನಲ್ಲಿ ರಣವೀರ್ ನಟನೆಯ ಸಮಯದಲ್ಲಿ ಪಂಜುರ್ಲಿ ಮತ್ತು ಗುಲಿಗ ದೈವಕ್ಕೆ ಸಂಬಂಧಿಸಿದ ಅಭಿವ್ಯಕ್ತಿಗಳನ್ನು ಅನುಕರಿಸಿದ್ದಾರೆ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ.
Previous Articleಸರ್ಕಾರದ ವಿರುದ್ಧ ಗುತ್ತಿಗೆದಾರರ ಸಮರ.
Next Article ಗುತ್ತಿಗೆದಾರರಿಗೆ ಬೈರತಿ ಸುರೇಶ್ ತಿರುಗೇಟು

