ಬೆಂಗಳೂರು, ಜೂ.13-
ವಿಧಾನಪರಿಷತ್ ನ ದಕ್ಷಿಣ ಪದವೀಧರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗು ವಾಯುವ್ಯ ಶಿಕ್ಷಕ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲೆವೆಡೆ ಬಿರುಸಿನ ಮತ್ತೆ ಕೆಲವೆಡೆ ನೀರಸ ಮತದಾನ ನಡೆದಿದೆ.
ಮೈಸೂರು, ಮಂಡ್ಯ, ಹಾಸನ, ಧಾರವಾಡ, ಹಾವೇರಿ, ಗದಗ,ವಿಜಯಪುರ, ಬಾಗಲಕೋಟ, ಬೆಳಗಾವಿ, ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಪ್ರದೇಶದಲ್ಲಿ ಮತದಾನ ನಡೆದಿದ್ದು ಸುಶಿಕ್ಷಿತ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಸುಗಮ ಮತದಾನಕ್ಕಾಗಿ ಆಯೋಗ ಎಲ್ಲಾ ಸಿದ್ದತೆ ಮಾಡಿತ್ತು. ಮತದಾರರ ಪಟ್ಟಿಯಲ್ಲಿರುವ ಎಲ್ಲಾ ಅರ್ಹ ಮತದಾರರು ನಿಗಧಿ ಪಡಿಸಿರುವ ಗುರುತಿನ ಚೀಟಿ ತೋರಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು.ಬೆಳಿಗ್ಗೆ ಎಂಟು ಗಂಟೆಯಿಂದ ಮತದಾನ ಆರಂಭವಾಯಿತು.
ಕೆಲವು ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆಯೆ ಸಾಲುಗಟ್ಟಿ ನಿಂತಿದ್ದರೆ, ಮತ್ತೆ ಕೆಲವು ಕಡೆ ಬಿಸಿಲೇರಿದಂತೆ ಮತದಾನದ ಪ್ರಮಾಣ ಚುರುಕುಗೊಂಡಿತು. ಕೆಲವು ಕಡೆಯಂತೂ ಮತಗಟ್ಟೆ ಸಮೀಪದಲ್ಲೇ ಮತದಾರರನ್ನು ಒಲೈಸುವ ಹಾಗು ಅವರುಗಳಿಗೆ ಆಮಿಷವೊಡ್ಡುವ ದೃಶ್ಯ ಮಾಮೂಲಿಯಾಗಿತ್ತು.ಈ ಚುನಾವಣೆಗೆ ಕಠಿಣ ನೀತಿ ಸಂಹಿತೆಯಿಲ್ಲದ ಕಾರಣ ಪೊಲೀಸರು ಅಕ್ರಮ ಕಂಡೂ ಕಾಣದಂತಿದ್ದರು.
ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಅರ್ಹ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಸರ್ಕಾರ ಮಂಜೂರು ಮಾಡಿದೆ. ವಿಧಾನಪರಿಷತ್‍ನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ 49 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ನಾಲ್ವರು ಮಹಿಳೆಯರೂ ಕೂಡ ಸ್ಪರ್ಧೆಗಿಳಿದಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,922 ಮತದಾರರು ಇದ್ದು 1,81,773 ಪುರುಷ ಹಾಗೂ 1,03,121 ಮಹಿಳಾ ಮತ್ತು 28 ಇತರೆ ಮತದಾರರು ಇದ್ದಾರೆ.
407 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮತದಾನದ ಸಿಬ್ಬಂದಿ ಇಂದು ಮತಗಟ್ಟೆಗಳಿಗೆ ತೆರಳಿದ್ದಾರೆ. ಮತ ಎಣಿಕೆಯು ಜೂ.15ರಂದು ನಡೆಯಲಿದೆ.
ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯುವ್ಯ ಶಿಕ್ಷಕರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರಗಳ ಮತ ಎಣಿಕೆಯು ಬೆಳಗಾವಿಯ ಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆಯು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದೆ.
ಜುಲೈ 4ರಂದು ನಿವೃತ್ತಿಯಾಗಲಿರುವ ವಿಧಾನಪರಿಷತ್ ಸದಸ್ಯರಾದ ನಿರಾಣಿ ಹಣಮಂತ ರುದ್ರಪ್ಪ, ಕೆ.ಟಿ.ಶ್ರೀಕಂಠೇಗೌಡ, ಅರುಣ್ ಶಹಾಪುರ, ಬಸವರಾಜ ಹೊರಟ್ಟಿ ಅವರು ನಿವೃತ್ತಿಯಾಗಲಿದ್ದು, ನಿವೃತ್ತಿಯಿಂದ ತೆರವಾಗುವ ಈ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿಲ್ಲ. ಉಳಿದ ಮೂರು ಕ್ಷೇತ್ರಗಳಲ್ಲೂ ಸೃಷ್ಟಿಸಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಾಲ್ಕೂ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿವೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಮಧು.ಜಿ ಮಾದೇಗೌಡ, ಬಿಜೆಪಿಯಿಂದ ಮೈ.ವಿ.ರವಿಶಂಕರ್, ಜೆಡಿಎಸ್‍ನಿಂದ ಎಚ್.ಕೆ.ರಾಮು, ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಅಭ್ಯರ್ಥಿಗಳಾಗಿ ಸ್ರ್ಪಸಿದ್ದಾರೆ.ಈ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸುನೀಲ ಅಣ್ಣಪ್ಪ ಸಂಕ, ಬಿಜೆಪಿಯಿಂದ ನಿರಾಣಿ ಹಣಮಂತ ರುದ್ರಪ್ಪ ಸೇರಿದಂತೆ 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣಾ ಶಹಾಪುರ, ಕಾಂಗ್ರೆಸ್‍ನಿಂದ ಪ್ರಕಾಶ ಬಾಬಣ್ಣ ಹುಕ್ಕೇರಿ, ಜೆಡಿಎಸ್‍ನಿಂದ ಚಂದ್ರಶೇಖರ ಏಸಪ್ಪ ಲೋಣಿ ಸೇರಿದಂತೆ 12 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.